October 13, 2026

ಸೈಂಟ್ ಆಗ್ನೆಸ್ ಕಾಲೇಜು ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ: ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ

f27fcd9b-44d7-495a-8803-eb8b843b9e79

ಮಂಗಳೂರು: ಅಕ್ಟೊಬರ್ ತಿಂಗಳ ಸೆಮಿಸ್ಟರ್ ಅಂತ್ಯ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಅಕ್ಟೊಬರ್ 12ರ ಸೋಮವಾರದಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಮಂಗಳೂರಿನ ‘ಸಂತ ಆಗ್ನೆಸ್ ಕಾಲೇಜು ಸ್ಪಷ್ಟೀಕರಣ ನೀಡಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಕ್ಟೋಬರ್ 19 ಹಾಗೂ 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮರುನಿಗದಿಪಡಿಸಿದೆ.

ಸಂತ ಆಗ್ನೆಸ್ ಕಾಲೇಜು, ಮಂಗಳೂರು, ಅಕ್ಟೊಬರ್ 2026ರ ಸೆಮಿಸ್ಟರ್ ಅಂತ್ಯ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಸೋಮವಾರ, 12 ಅಕ್ಟೋಬರ್ 2026ರಂದು ಕೆಲವು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ಕೆಳಗಿನ ಸ್ಪಷ್ಟಿಕರಣವನ್ನು ನೀಡಲು ಬಯಸುತ್ತದೆ. ಕಾಲೇಜಿನ ಅನುಮೋದಿತ ಶೈಕ್ಷಣಿಕ ಕ್ಯಾಲೆಂಡರ್‌ಗೆ ಅನುಗುಣವಾಗಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಸರ್ಕಾರ ಘೋಷಿಸಿರುವ ಯಾವುದೇ ಸಾರ್ವಜನಿಕ ರಜಾದಿನಗಳಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಲಾಗಿಲ್ಲ.

 

ಪರೀಕ್ಷೆಗಳ ಕರಡು ವೇಳಾಪಟ್ಟಿಯನ್ನು 11 ಸೆಪ್ಟೆಂಬರ್ 2026ರಂದು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಕಟಿಸಲಾಗಿತ್ತು. ವೇಳಾಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು, ಸ್ಪಷ್ಟಿಕರಣಗಳನ್ನು ಪಡೆಯಲು ಅಥವಾ ಅಗತ್ಯ ಬದಲಾವಣೆಗಳನ್ನು ಸೂಚಿಸಲು ವಿದ್ಯಾರ್ಥಿಗಳಿಗೆ ಹದಿನೈದು ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ, ವಿದ್ಯಾರ್ಥಿಗಳಿಂದ ಯಾವುದೇ ಆಕ್ಷೇಪಣೆಗಳಾಗಲಿ ಅಥವಾ ಪರೀಕ್ಷಾ ದಿನಾಂಕಗಳ ಬದಲಾವಣೆಗೆ ಸಂಬಂಧಿಸಿದ ಮನವಿಗಳಾಗಲಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, 26 ಸೆಪ್ಟೆಂಬರ್ 2026ರಂದು ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಅಲ್ಲದೆ, ಪಠ್ಯಕ್ರಮದ ಭಾಗವಾಗಿ ಈಗಾಗಲೇ ಯೋಜಿಸಲಾಗಿರುವ ಇಂಟರ್ನ್‌ಶಿಪ್ ಹಾಗೂ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಬದ್ಧತೆಗಳನ್ನೂ ಪರಿಗಣಿಸಿ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.

ಪ್ರಸ್ತಾವಿತ ಪ್ರತಿಭಟನೆಯ ಕುರಿತು ಕಾಲೇಜಿಗೆ ಮೊದಲ ಬಾರಿಗೆ 11 ಅಕ್ಟೋಬರ್ 2026ರ ಭಾನುವಾರ ಬೆಳಿಗ್ಗೆ 11:36ಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಲಭಿಸಿತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜು ಆಡಳಿತವು ಪೊಲೀಸ್ ಆಯುಕ್ತರ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿತು.

ಸೋಮವಾರ, 12 ಅಕ್ಟೋಬರ್ 2026ರಂದು, ಕಾಲೇಜು ಆಡಳಿತಕ್ಕೆ ಯಾವುದೇ ಪೂರ್ವ ಅಧಿಕೃತ ಮಾಹಿತಿ ನೀಡದೆ ಅಥವಾ ಲಿಖಿತ ಮನವಿ ಸಲ್ಲಿಸದೆ, ಕೆಲವು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘ ಪ್ರತಿಭಟನೆ ನಡೆಸಿ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಕಳವಳಗಳನ್ನು ಪರಿಗಣಿಸಿ ಹಾಗೂ ಕಾಲೇಜಿನಲ್ಲಿ ಸೌಹಾರ್ದಯುತ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ವಿಶಾಲ ಹಿತದೃಷ್ಟಿಯಿಂದ, 19 ಮತ್ತು 22 ಅಕ್ಟೋಬರ್ 2026ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿ ಮರುನಿಗದಿಪಡಿಸಲು ಕಾಲೇಜು ಆಡಳಿತವು ನಿರ್ಧರಿಸಿದೆ. ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಅಧಿಕೃತ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು.

ಈ ಪ್ರತಿಭಟನೆಯಲ್ಲಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರೂ, ಕಾಲೇಜು ಆಡಳಿತವು ಅವರ ಕಳವಳಗಳಿಗೆ ಸಂವಾದ, ಪರಸ್ಪರ ತಿಳುವಳಿಕೆ ಹಾಗೂ ಸದ್ಭಾವನೆಯ ಮನೋಭಾವದಿಂದ ಸ್ಪಂದಿಸಿದೆ. ವಿದ್ಯಾರ್ಥಿಗಳ ನ್ಯಾಯಸಮ್ಮತ ಕಳವಳಗಳಿಗೆ ಸ್ಪಂದಿಸುವುದರ ಜೊತೆಗೆ ಶೈಕ್ಷಣಿಕ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಸಂಸ್ಥೆಯ ಸ್ಥಿರತೆಯನ್ನು ಕಾಪಾಡುವ ಬದ್ಧತೆಯನ್ನು ಈ ನಿರ್ಧಾರವು ಪ್ರತಿಬಿಂಬಿಸುತ್ತದೆ.

ಕಾಲೇಜಿನ ಎಲ್ಲಾ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ನಿರ್ಧಾರಗಳು ಶೈಕ್ಷಣಿಕ ಅಗತ್ಯತೆಗಳು, ಸಂಸ್ಥೆಯ ನಿಯಮಾವಳಿಗಳು ಮತ್ತು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳ ನಿರ್ದೇಶನಗಳಿಗೆ ಅನುಗುಣವಾಗಿಯೇ ಕೈಗೊಳ್ಳಲಾಗುತ್ತವೆ ಎಂಬುದನ್ನು ಕಾಲೇಜು ಮತ್ತೊಮ್ಮೆ ದೃಢವಾಗಿ ಸ್ಪಷ್ಟಪಡಿಸುತ್ತದೆ. ಸಂತ ಆಗ್ನೆಸ್ ಕಾಲೇಜು ಜಾತ್ಯತೀತತೆ, ಸಮಾನತೆ, ಎಲ್ಲರನ್ನೂ ಒಳಗೊಳ್ಳುವ ಮನೋಭಾವ, ಧಾರ್ಮಿಕ ಸಾಮರಸ್ಯ ಹಾಗೂ ಪರಸ್ಪರ ಗೌರವದ ತತ್ವಗಳನ್ನು ಸದಾ ಎತ್ತಿಹಿಡಿದಿದೆ. ಈ ಮೌಲ್ಯಗಳು ಸಂಸ್ಥೆಯ ಶೈಕ್ಷಣಿಕ ಧ್ಯೆಯ ಮತ್ತು ಆಡಳಿತಾತ್ಮಕ ಕಾರ್ಯವೈಖರಿಯ ಮೂಲಾಧಾರಗಳಾಗಿವೆ.

ರಚನಾತ್ಮಕ ಸಂವಾದ ಮತ್ತು ವಿದ್ಯಾರ್ಥಿಗಳ ನ್ಯಾಯಸಮ್ಮತ ಕಳವಳಗಳಿಗೆ ಸ್ಪಂದಿಸಲು ಕಾಲೇಜು ಸದಾ ಮುಕ್ತವಾಗಿದೆ. ಅದೇ ಸಂದರ್ಭದಲ್ಲಿ, ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ನಿಗದಿತ ನಿಯಮಗಳು ಹಾಗೂ ಕಾರ್ಯವಿಧಾನಗಳನ್ನು ಗೌರವಿಸಿ, ಶಿಸ್ತು ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕೆಂದು ಕಾಲೇಜು ನಿರೀಕ್ಷಿಸುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಶಿಸ್ತಿನ ವರ್ತನೆ, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಪ್ರಯತ್ನ ಅಥವಾ ಕಾಲೇಜು ಆವರಣದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಂತಹ ಘಟನೆಗಳ ವಿರುದ್ಧ ಸಂಸ್ಥೆ ಅನ್ವಯಿಸುವ ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಕಾಲೇಜು ಸ್ಪಷ್ಟಪಡಿಸುತ್ತದೆ.

ಈ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಕಾಲಿಕ ನೆರವು, ಸಹಕಾರ ಹಾಗೂ ಬೆಂಬಲ ನೀಡಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಪೊಲೀಸ್ ಸಿಬ್ಬಂದಿ ಹಾಗೂ ಪೋಷಕರ ಸಂಘದ ಸದಸ್ಯರಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯು ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

You may have missed

error: Content is protected !!