ಮೂಡುಬಿದಿರೆ: ನಿಯಂತ್ರಣ ತಪ್ಪಿ ಬಿದ್ದ ಸ್ಕೂಟರ್: ಕಾಲೇಜು ವಿದ್ಯಾರ್ಥಿ ಸಾವು
ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಚಲಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ಕೋಟೆಬಾಗಿಲು ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ, ಮೂಡುಬಿದಿರೆಯ ಜೈನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಶ್ವಿತ್ ಹೆಗ್ಡೆ (17) ಮೃತಪಟ್ಟ ದುರದೃಷ್ಟಕರ ಯುವಕ.
ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ಪ್ರಶ್ವಿತ್ ಹೆಗ್ಡೆ ಹಾಗೂ ದೀಕ್ಷಿತ್ ಹೆಗ್ಡೆ ಒಂದೇ ಸ್ಕೂಟರಿನಲ್ಲಿ ತೆರಳುತ್ತಿದ್ದರು. ವೀರ ಮಾರುತಿ ದೇವಸ್ಥಾನದ ಬಳಿಯ ಅಪಾಯಕಾರಿ ತಿರುವಿನಲ್ಲಿ ಸಾಗುತ್ತಿದ್ದಾಗ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ.
ಅಪಘಾತದ ರಭಸಕ್ಕೆ ಸ್ಕೂಟರ್‌ನಿಂದ ಬಿದ್ದ ಪ್ರಶ್ವಿತ್ ಹೆಗ್ಡೆ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದರೆ, ಜೊತೆಯಲ್ಲಿದ್ದ ದೀಕ್ಷಿತ್ ಅವರ ತಲೆಗೂ ಗಾಯಗಳಾಗಿವೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಇಬ್ಬರನ್ನೂ ಚಿಕಿತ್ಸೆಗೆಂದು ಮೂಡುಬಿದಿರೆಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆಗೆ ಭಾರಿ ಪ್ರಮಾಣದ ಆಂತರಿಕ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಪ್ರಶ್ವಿತ್ ಹೆಗ್ಡೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.






