ಬಂಟ್ವಾಳ: ಸಿಡಿಲು ಬಡಿದು ಮನೆಗೆ ಹಾನಿ: ಮಹಿಳೆಗೆ ಗಾಯ
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಅನಿಲ್ದಡ್ಡ ಎಂಬಲ್ಲಿ ಸಿಡಿಲು ಬಡಿದು ಮನೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಇಲ್ಲಿನ ನಿವಾಸಿ ನಾಗೇಶ್ ಕುಲಾಲ್ ಅವರ ಹೆಂಚಿನ ಮನೆಗೆ ಬೆಳಗ್ಗೆ ಸುಮಾರು 6 ಗಂಟೆಗೆ ಸಿಡಿಲು ಬಡಿದಿದ್ದು, ಸಿಡಿಲಿನ ತೀವ್ರತೆಗೆ ಮನೆ ಸಂಪೂರ್ಣ ಹಾನಿಗೊಂಡಿದ್ದು, ಹೆಂಚಿನ ಛಾವಣಿ ಸಹಿತ ಮನೆಯೊಳಗಿನ ವಸ್ತುಗಳು ಹಾನಿಯಾಗಿದೆ.
ಘಟನೆಯಲ್ಲಿ ನಾಗೇಶ್ ಕುಲಾಲ್ ಅವರ ಪತ್ನಿ ಕುಶಲಾಕ್ಷಿ ಅವರು ತೀವ್ರವಾಗಿ ಗಾಯಗೊಂಡಿದ್ದು, ತತ್ ಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಶಾಲಾಕ್ಷಿ ಅವರು ಅಡುಗೆ ಕೋಣೆಯಲ್ಲಿ ಅಡುಗೆಯಲ್ಲಿ ನಿರತರಾಗಿರುವಾಗ ಸಿಡಿಲು ಬಡಿದಿದೆ. ನಾಗೇಶ್ ಅವರು ಸಮೀಪದಲ್ಲಿರುವ ತಂದೆ ಮನೆಗೆ ತೆರಳಿದ್ದರು. ಮನೆಯಲ್ಲಿ ಪತಿ, ಪತ್ನಿ ಇಬ್ಬರೇ ವಾಸವಾಗಿದ್ದಾರೆ. ಸಮೀಪ ಯಾವುದೇ ಮನೆಗಳಿಲ್ಲದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ.
ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




