ಮಂಗಳೂರು: ಆಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ನ.1ರಿಂದ ಹೊಸ ದರ ಜಾರಿ
ಮಂಗಳೂರು: ಇಂಧನ ಬೆಲೆ ಹಾಗೂ ವಾಹನ ಬಿಡಿಭಾಗಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಆಟೋ ಚಾಲಕರ ಖರ್ಚು ವೆಚ್ಚಗಳು ಕೂಡ ಹೆಚ್ಚಾಗಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ನೂತನ ದರಗಳು ನವೆಂಬರ್ 1ರಿಂದ ಜಾರಿಗೆ ಬರಲಿವೆ.
ಆಟೋ ಚಾಲಕರ ಕ್ಷೇಮಾಭಿವೃದ್ಧಿ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿ ಈ ದರ ನಿಗದಿಪಡಿಸಲಾಗಿದೆ.
ಪರಿಷ್ಕೃತ ಆಟೋ ದರಗಳ ವಿವರ: ಕನಿಷ್ಠ ಪ್ರಯಾಣ ದರ (ಮೊದಲ 1.5 ಕಿ.ಮೀ): ರೂ 40.00 (ಗರಿಷ್ಠ 3 ಜನ ಪ್ರಯಾಣಿಕರಿಗೆ). ನಂತರದ ಪ್ರತಿ ಕಿಲೋಮೀಟರ್ ದರ: ರೂ 23.00 (ಗರಿಷ್ಠ 3 ಜನ ಪ್ರಯಾಣಿಕರಿಗೆ).
ಕಾಯುವಿಕೆ ದರ (Waiting Charges): ಮೊದಲ 10 ನಿಮಿಷ ಉಚಿತ. ನಂತರದ ಪ್ರತಿ 15 ನಿಮಿಷದವರೆಗೆ ರೂ 5.00.
ಪ್ರಯಾಣಿಕರ ಸರಕು ದರ (Luggage Charges): ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆಗಿರಬೇಕು.
ಮೊದಲ 20 ಕೆ.ಜಿ.ವರೆಗೆ ಉಚಿತ. ನಂತರದ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ರೂ 5
ರಾತ್ರಿ ವೇಳೆ ದರ (Night Charges): ರಾತ್ರಿ 10:00 ಗಂಟೆಯಿಂದ ಬೆಳಗಿನ ಜಾವ 05:00 ಗಂಟೆಯವರೆಗೆ ಸಾಮಾನ್ಯ ದರದ ಒಂದೂವರೆ ಪಟ್ಟು (1.5 Times) ದರವನ್ನು ಪಡೆಯಲು ಅವಕಾಶವಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ದರದ ಪಟ್ಟಿಯನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲೂ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಆಟೋ ಚಾಲಕ – ಮಾಲೀಕರು ತಮ್ಮ ಆಟೋಗಳ ಡಿಜಿಟಲ್ ಮೀಟರ್‌ಗಳನ್ನು ನಿಗದಿತ ಅವಧಿಯೊಳಗೆ ರಿಕ್ಯಾಲಿಬ್ರೇಶನ್ ಹಾಗೂ ಸೀಲ್ ಮಾಡಿಸಿಕೊಳ್ಳಬೇಕು.
ಪ್ರಯಾಣಿಕರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಕಾನೂನು ರೀತ್ಯಾ ದಂಡ ವಿಧಿಸುವುದು, ಪರವಾನಗಿ ಅಮಾನತು, ರದ್ದುಪಡಿಸುವಂತಹ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಾಧಿಕಾರ ಎಚ್ಚರಿಸಿದೆ.




