ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ನಕಲಿ ಹಾಲ್ ಟಿಕೆಟ್ ಸೃಷ್ಟಿ: ಕಡಬದ ಯುವಕನನ್ನು ಬಂಧಿಸಿದ ಪೊಲೀಸರು
ಕಡಬ: ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ನಕಲಿ ಹಾಲ್ ಟಿಕೆಟ್ ಸೃಷ್ಟಿಸಿ ವಂಚಿಸಲು ಯತ್ನಿಸಿದ ಕಡಬ ಮೂಲದ ಯುವಕನನ್ನು ಮಂಗಳೂರು ನಗರದ ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ಮನೆ ನಿವಾಸಿ ಯಜೇಶ್ ಬಿ.ಜೆ. ರೈ (22) ಎಂದು ಗುರುತಿಸಲಾಗಿದೆ.
ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ-2026ರ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ (ET & PST) ಪರೀಕ್ಷೆಯು ಸೆ.28ರಂದು ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ನೋಂದಣಿ ಡೆಸ್ಕ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಯಜೇಶ್ ಹಾಲ್ ಟಿಕೆಟ್ (ಸಂಖ್ಯೆ: CPC5225446) ಹಾಜರುಪಡಿಸಿದ್ದಾನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಒದಗಿಸಿದ್ದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ 1:5 ಅರ್ಹತಾ ಪಟ್ಟಿಯಲ್ಲಿ ಈತನ ಹೆಸರಾಗಲಿ, ಅರ್ಜಿ ಸಂಖ್ಯೆಯಾಗಲಿ ಕಂಡುಬಂದಿಲ್ಲ. ಅನುಮಾನಗೊಂಡ ಅಧಿಕಾರಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿ ಎಂಬುದು ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಯಜೇಶ್ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಲಿಲ್ಲ ಎಂಬುದು ಬಯಲಾಗಿದೆ. ಆದರೂ ದೈಹಿಕ ಪರೀಕ್ಷೆಗೆ ಹಾಜರಾಗುವ ದುರುದ್ದೇಶದಿಂದ, ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್ ಟಿಕೆಟ್ ಪಡೆದುಕೊಂಡು AI ತಂತ್ರಜ್ಞಾನ ಬಳಸಿ ಅದರಲ್ಲಿ ತನ್ನ ಹೆಸರು ಹಾಗೂ ವಿವರಗಳನ್ನು ಎಡಿಟ್ ಮಾಡಿ ನಕಲಿ ಕರೆಪತ್ರ ಸೃಷ್ಟಿಸಿಕೊಂಡಿದ್ದನು. ಯಜೇಶ್ ಮೊಬೈಲ್ ಫೋನ್ ಪರಿಶೀಲಿಸಿದಾಗ ನಕಲಿ ಹಾಲ್ ಟಿಕೆಟ್ ಎಡಿಟ್ ಮಾಡಿರುವುದಕ್ಕೆ ಸಂಬಂಧಿಸಿದ ಡಿಜಿಟಲ್ ಪುರಾವೆಗಳು ಪತ್ತೆಯಾಗಿವೆ.





