ಹೈದರಾಬಾದ್‌ನಲ್ಲಿ ಭೀಕರ ಹಿಟ್ & ರನ್ – 8 ಮಂದಿ ಪಾದಚಾರಿಗಳಿಗೆ ಗುದ್ದಿದ ಕಾರು, ಮೂವರ ಸ್ಥಿತಿ ಗಂಭೀರ
ಹೈದರಾಬಾದ್: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 8 ಕಾರ್ಮಿಕರಿಗೆ ಕಾರು ಗುದ್ದಿಕೊಂಡು ಹೋದ ಭೀಕರ ಘಟನೆ ಹೈದರಾಬಾದ್‌ನ ಕುಶೈಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾ ನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಕಾರು ಡಿಕ್ಕಿಯಾದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆ.29ರ ಮುಂಜಾನೆ ಬಿಹಾರ ಮೂಲದ ಕಾರ್ಮಿಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಹಿಂದಿನಿಂದ ವೇಗವಾಗಿ ಬಂದ ಕಾರು ಪಾದಾಚಾರಿಗಳಿಗೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ 7-8 ಮಂದಿ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಶೈಗುಡ ಪೊಲೀಸರು, ಮೌಲಾ ಅಲಿಯ ಬಳಿಯ ಬಾರ್ & ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಿಕ್ರಮ್ ಕುಮಾರ್ (25) ಸೇರಿದಂತೆ ಉಳಿದ ಕಾರ್ಮಿಕರು ಕೆಲಸ ಮುಗಿಸಿ ಹೋಗುತ್ತಿದ್ದಾಗ ಕಾರು ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಅಜಯ್ ಕುಮಾರ್, ಬಿಪಿನ್ ಕುಮಾರ್ ಯಾದವ್ ಮತ್ತು ರಾಜೇಶ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಪಾದಾಚಾರಿಗಳಿಗೆ ಕಾರು ಗುದ್ದಿಸಿ ಪರಾರಿಯಾಗಿದ್ದ ಚಾಲಕ ಹಾಗೂ ಕಾರಿನಲ್ಲಿದ್ದ ಮತ್ತೊಬ್ಬನನ್ನು ಕುಶೈಗುಡ ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪವನ್ ಮತ್ತು ಆತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪವನ್ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ. ಇದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.





