ಮಂಗಳೂರು: ಕೋರ್ಟ್ ಆವರಣದಿಂದ ಕೊಲೆ ಆರೋಪಿ ಪರಾರಿ: 24 ಗಂಟೆಯೊಳಗೆ ಬಂಧಿಸಿದ ಪೊಲೀಸರು
ಮಂಗಳೂರು: ಜೈಲಿಗೆ ರವಾನಿಸುವ ಸಂದರ್ಭದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಮಂಗಳೂರು ಕೋರ್ಟ್ ಆವರಣದಿಂದ ಶೌಚಾಲಯದ ನೆಪವೊಡ್ಡಿ ಪರಾರಿಯಾಗಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ಕಮಿಷನರೇಟ್ ಪೊಲೀಸರು 24 ಗಂಟೆಗಳ ಒಳಗಾಗಿ ಜಾಲ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದ ಆರೋಪಿ ಪ್ರಸಾದ್ ಬಂಧಿತ ವ್ಯಕ್ತಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸೆಪ್ಟೆಂಬರ್ 22 ರಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೂಡುಬಿದಿರೆಯ ಕೊಲೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಪ್ರಕರಣದ ಒಟ್ಟು 5 ಮಂದಿ ಆರೋಪಿಗಳ ಪೈಕಿ ಸಂದೀಪ್ ಶೆಟ್ಟಿ, ಪ್ರಸಾದ್, ಬಾಲರಾಜ್ ಹಾಗೂ ಪ್ರಭಾಕರ್ ಎಂಬ ನಾಲ್ವರು ವಿಚಾರಣೆಗೆ ಹಾಜರಾಗಿದ್ದರು.
ಆರೋಪಿ ಪ್ರಸಾದ್ ಈ ಹಿಂದೆ ವಿಚಾರಣೆಗೆ ಗೈರುಹಾಜರಾಗಿದ್ದರಿಂದ ಆತನ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ (NBW) ಜಾರಿಗೊಳಿಸಿತ್ತು. ವಿಚಾರಣೆ ವೇಳೆ ಆತನ ಪರ ಯಾವುದೇ ವಕೀಲರು ಹಾಜರಿರದ ಕಾರಣ, ನ್ಯಾಯಾಧೀಶರು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ರಿಮಾಂಡ್ ವಾರಂಟ್ ಹೊರಡಿಸಿದ್ದರು.





