September 18, 2026

ಕರಾವಳಿ-ಮಲೆನಾಡಿನ ಬೇಡಿಕೆ ಈಡೇರಿಕೆಗೆ ಒತ್ತು: ಸಿಎಂ ಡಿ.ಕೆ.ಶಿವಕುಮಾರ್

0
image_editor_output_image-1837317432-1789705975706

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಹೊಸ ರೂಪ ನೀಡುವ ಮೂಲಕ ಇಲ್ಲಿನ ಮಾನವ ಸಂಪತ್ತು ಹಾಗೂ ಬೃಹತ್ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಭಾಗದ ಸುದೀರ್ಘ ದಿನಗಳ ಬೇಡಿಕೆಗಳು ಹಾಗೂ ಕಸ್ತೂರಿರಂಗನ್ ವರದಿ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.


ಕರ್ನಾಟಕದ 340 ಕಿ.ಮೀ. ಉದ್ದದ ಕರಾವಳಿ ತೀರವನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಅಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡಬೇಕಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ಇಲ್ಲಿನ ಯುವಜನತೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆದು, ಅವರಿಗೆ ಸ್ಥಳೀಯವಾಗಿಯೇ ಶಕ್ತಿ ತುಂಬುವ ಕೆಲಸವಾಗಬೇಕಿದೆ” ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.

ಕರಾವಳಿ ಭಾಗದ ಜನರು ಕಳೆದ 30–40 ವರ್ಷಗಳಿಂದ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಕುರಿತು ಪಕ್ಷಾತೀತವಾಗಿ ಬಿಜೆಪಿ ಶಾಸಕರು ಹಾಗೂ ಸಂಸದರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. “ನಾವು ಕೈಹಿಡಿಯದಿದ್ದರೆ ಇನ್ನಾರು ಕೈಹಿಡಿಯುತ್ತಾರೆ ಎಂಬ ನಿರೀಕ್ಷೆ ಅವರಲ್ಲಿದೆ. ಆ ಎಲ್ಲಾ ಬೇಡಿಕೆಗಳು ನನ್ನ ಗಮನದಲ್ಲಿದ್ದು, ಶುಕ್ರವಾರ ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದರು. ಕಸ್ತೂರಿರಂಗನ್ ವರದಿ ಜಾರಿ ಕುರಿತು ಪ್ರತಿಕ್ರಿಯಿಸಿದ ಸಿಎಂ, ಸರ್ಕಾರ ಈಗಾಗಲೇ ವರದಿಯನ್ನು ತಿರಸ್ಕರಿಸುವ ಸ್ಪಷ್ಟ ನಿಲುವು ತಳೆದಿದ್ದರೂ, ವಿವಿಧ ವಲಯಗಳಿಂದ ಒತ್ತಡಗಳು ಹಾಗೂ ವಿಭಿನ್ನ ಅಭಿಪ್ರಾಯಗಳಿವೆ ಎಂದರು.

Leave a Reply

Your email address will not be published. Required fields are marked *

error: Content is protected !!