ಉಳ್ಳಾಲ: ಸೌದಿಯಲ್ಲಿ ಕುತ್ತಾರಿನ ಯುವಕ ಹೃದಯಾಘಾತದಿಂದ ಸಾವು
ಉಳ್ಳಾಲ: ಐದು ತಿಂಗಳ ಹಿಂದಷ್ಟೇ ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಮಂಗಳೂರು ಸಮೀಪದ ಕುತ್ತಾರು ನಿವಾಸಿ, ಅವಿವಾಹಿತ ಯುವಕನೋರ್ವ ಮಂಗಳವಾರ ಬೆಳಿಗ್ಗೆ ತಾನು ತಂಗಿದ್ದ ಕೊಠಡಿಯಲ್ಲೇ ದಿಢೀರನೆ ಮೃತಪಟ್ಟ ಘಟನೆ ಸಂಭವಿಸಿದೆ.
ಪ್ರಾಥಮಿಕ ಮಾಹಿತಿಯಂತೆ ಯುವಕ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿಯ ನಿವಾಸಿ ಶರತ್ ಕುಮಾರ್ (35) ಮೃತಪಟ್ಟ ದುರದೃಷ್ಟಕರ ಯುವಕ.
ಶರತ್ ಅವರು ಕೇವಲ ಐದು ತಿಂಗಳ ಹಿಂದಷ್ಟೇ ಸೌದಿ ಅರೇಬಿಯಾಕ್ಕೆ ತೆರಳಿದ್ದು, ಅಲ್ಲಿನ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ತಮಿಳುನಾಡು ಮೂಲದ ಸಹೋದ್ಯೋಗಿ ಮಿತ್ರನ ಜೊತೆಗೆ ಕಂಪನಿಯ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಕೊಠಡಿ ಸಹವರ್ತಿ ಬಂದಾಗ ಶರತ್ ಮಲಗಿದ್ದರು. ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಬೇಗನೆ ತೆರಳಬೇಕಿದ್ದ ಕಾರಣ ಶರತ್ ಅಲಾರಾಂ ಇಟ್ಟು ಮಲಗಿದ್ದರು. ಬೆಳಿಗ್ಗೆ ಅಲಾರಾಂ ಸದ್ದು ಬಾರಿಸಿದರೂ ಶರತ್ ಎದ್ದೇಳಲಿಲ್ಲ. ಅನುಮಾನಗೊಂಡು ಕೊಠಡಿ ಸಹವರ್ತಿ ಪರಿಶೀಲಿಸಿದಾಗ ಶರತ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.





