September 8, 2026

ದಾವಣಗೆರೆ: ಗಾಯಗೊಂಡಿದ್ದ ಚಿರತೆ ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ

0
IMG-20260908-WA0101

ದಾವಣಗೆರೆ: ಗಾಯಗೊಂಡಿದ್ದ ಚಿರತೆಯೊಂದು ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಎರಗಿ ಗಾಯಗೊಳಿಸಿದ ಘಟನೆ ತಾಲೂಕಿನ‌ ಆನಗೋಡು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ (ಸೆ.08) ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡು ಸೋಮವಾರ ರಾತ್ರಿಯಿಡೀ ರಸ್ತೆ ಬದಿಯಲ್ಲೇ ನರಳಿದ ಚಿರತೆ ಮಂಗಳವಾರ (ಸೆ.08) ಬೆಳಗಿನ ಜಾವ ರಕ್ಷಣೆ ಮಾಡಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆರಗಿ ಗಾಯಗೊಳಿಸಿದೆ.

ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ಚಿರತೆಗೆ ರಭಸವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಪಕ್ಕದ ಚರಂಡಿಗೆ ಬಿದ್ದ ಚಿರತೆಗೆ ಗಂಭೀರ ಗಾಯವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪೊಲೀಸರು ಈ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು.

ಗಾಯದಿಂದ ನರಳಾಡುತ್ತಿದ್ದ ಚಿರತೆಗೆ ಚಿಕಿತ್ಸೆ ಕೊಡುವ ಸಲುವಾಗಿ, ಅದನ್ನು ರಕ್ಷಣೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾದರು. ಹಂಪಿಯಿಂದ ಆಗಮಿಸಿದ ವೈದ್ಯರ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ ಮೊದಲು ಅರಿವಳಿಕೆ ಇಂಜೆಕ್ಷನ್ ನೀಡಿ ರಕ್ಷಣೆ ಮಾಡಲು ಯತ್ನಿಸಿದಾಗ, ಸಿಬ್ಬಂದಿಯ ಮೇಲೆಯೇ ಚಿರತೆ ದಾಳಿ ಮಾಡಿದೆ. ಇದರಿಂದ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡನೇ ಬಾರಿಗೆ ಅರಿವಳಿಕೆ ನೀಡಿದ ಬಳಿಕ ಚಿರತೆಯನ್ನು ಸೆರೆಹಿಡಿದು, ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.

Leave a Reply

Your email address will not be published. Required fields are marked *

error: Content is protected !!