ಚಿಕ್ಕಮಗಳೂರು: 40 ಅಡಿ ಎತ್ತರದಿಂದ ಮನೆ ಮೇಲೆ ಉರುಳಿಬಿದ್ದ ಜೀಪ್: ಪ್ರಯಾಣಿಕರು ಪಾರು
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿಗರಿದ್ದ ಜೀಪೊಂದು 40 ಅಡಿ ಎತ್ತರದಿಂದ ಮನೆಯೊಂದರ ಮೇಲೆ ಉರುಳಿಬಿದ್ದ ಘಟನೆ ಚಂದ್ರದ್ರೋಣ ಪರ್ವತದ ಸಾಲಿನ ಝರಿ ಫಾಲ್ಸ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಚಾಲಕ ಸೇರಿದಂತೆ ಮೂವರು ಪ್ರವಾಸಿಗರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೀಪ್ ಬಿದ್ದ ರಭಸಕ್ಕೆ ಕಾರ್ಮಿಕರ ಲೈನ್ ಮನೆಗೆ ಹಾನಿಯುಂಟಾಗಿದೆ. ಜೀಪಿನಲ್ಲಿ ಕೇರಳ ಮೂಲದ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಜೀಪ್ ಚಾಲಕನ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.





