September 8, 2026

ಉಳ್ಳಾಲ : ಹರೇಕಳ ಹಾಜಬ್ಬರಿಗೆ ಚುನಾವಣಾ ಆಯೋಗದ ನೋಟಿಸ್ – ಮನೆಗೆ ತೆರಳಿ ಕ್ಷಮೆಯಾಚಿಸಿದ ಅಧಿಕಾರಿಗಳು!

0
image_editor_output_image227302574-1788860829249

ಉಳ್ಳಾಲ: ಅಕ್ಷರ ಕ್ರಾಂತಿಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿರುವ ಘಟನೆ ನಡೆದಿದೆ. ಹಳೆಯ ಮತದಾರರ ಪಟ್ಟಿಯಲ್ಲಿನ ಹೆಸರು ಹಾಗೂ ಪ್ರಸ್ತುತ ದಾಖಲೆಗಳಲ್ಲಿನ ಹೆಸರಿನ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿತ್ತು ಎನ್ನಲಾಗಿದೆ.

ನಂತರ ಇದು ಕೇವಲ ದಾಖಲೆಗಳಲ್ಲಿನ ಹೆಸರು ಹೊಂದಾಣಿಕೆ ವಿಚಾರ ಎಂಬುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಹರೇಕಳದಲ್ಲಿರುವ ಹಾಜಬ್ಬ ಅವರ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ನೋಟಿಸ್ ನೀಡಿದ್ದಕ್ಕೆ ಸಂಬಂಧಿಸಿದಂತೆ ಹಾಜಬ್ಬ ಅವರ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹಿಂದಿನ ಉಳ್ಳಾಲ ಕ್ಷೇತ್ರದ 2002ರ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ನಮೂದಾಗಿತ್ತು. ಆದರೆ ಪ್ರಸ್ತುತ ಅವರ ಪಡಿತರ ಚೀಟಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ಮತದಾರರ ಗುರುತಿನ ಚೀಟಿಯಲ್ಲಿ ‘ಹರೇಕಳ ಹಾಜಬ್ಬ’ ಎಂದು ಹೆಸರು ದಾಖಲಾಗಿದೆ. ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ (SIR) ಪ್ರಕ್ರಿಯೆ ವೇಳೆ ಹಳೆಯ ಮತದಾರರ ಪಟ್ಟಿಯಲ್ಲಿರುವ ಹೆಸರು ಹಾಗೂ ಪ್ರಸ್ತುತ ದಾಖಲೆಗಳಲ್ಲಿನ ಹೆಸರಿನ ನಡುವೆ ಹೊಂದಾಣಿಕೆ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಹಾಜಬ್ಬ ಅವರಿಗೆ ನೋಟಿಸ್ ನೀಡಲಾಗಿತ್ತು.

ನೋಟಿಸ್‌ನಲ್ಲಿ ಸೆಪ್ಟೆಂಬರ್ 11ರಂದು ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಬಳಿಕ ಅಧಿಕಾರಿಗಳು ಪ್ರಕರಣದ ವಿವರಗಳನ್ನು ಪರಿಶೀಲಿಸಿದಾಗ, ಇದು ಹೆಸರು ಹೊಂದಾಣಿಕೆಗೆ ಸಂಬಂಧಿಸಿದ ವಿಚಾರ ಎಂಬುದು ಸ್ಪಷ್ಟವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಜಬ್ಬ ಅವರ ಹರೇಕಳದ ಮನೆಗೆ ತೆರಳಿ ಅಗತ್ಯ ದಾಖಲೆಗಳನ್ನು ಪರಿಶೀಲನೆಗಾಗಿ ಪಡೆದುಕೊಂಡಿದ್ದಾರೆ. ಮನೆಗೆ ಭೇಟಿ ನೀಡಿದ ವೇಳೆ ನೋಟಿಸ್ ಜಾರಿಯಾಗಿದ್ದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಜಬ್ಬ ಅವರ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ. ದಾಖಲೆಗಳಲ್ಲಿನ ಹೆಸರು ವ್ಯತ್ಯಾಸದಿಂದಾಗಿ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಗ್ರಾಮದವರಾದ ಹರೇಕಳ ಹಾಜಬ್ಬ ಅವರು ಸ್ವತಃ ಶಿಕ್ಷಣದಿಂದ ವಂಚಿತರಾದ ಅನುಭವದಿಂದ ತಮ್ಮ ಗ್ರಾಮದ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಕನಸು ಕಂಡವರು. ಕಿತ್ತಳೆ ಹಣ್ಣು ಮಾರಾಟದಿಂದ ಗಳಿಸಿದ ಹಣವನ್ನು ಉಳಿಸಿ, ತಮ್ಮ ಗ್ರಾಮದಲ್ಲಿ ಶಾಲೆ ನಿರ್ಮಿಸುವ ಮಹತ್ವದ ಕಾರ್ಯಕ್ಕೆ ಮುಂದಾದ ಅವರು ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ನಿಸ್ವಾರ್ಥ ಶಿಕ್ಷಣ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸರಳ ಜೀವನ ನಡೆಸುತ್ತಾ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸಲು ನಿರಂತರವಾಗಿ ಶ್ರಮಿಸಿರುವ ಹಾಜಬ್ಬ ಅವರನ್ನು ದೇಶದಾದ್ಯಂತ ‘ಅಕ್ಷರ ಸಂತ’ ಎಂದೇ ಗೌರವಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!