September 8, 2026

ಉಡುಪಿ: ರಸ್ತೆಯ ಬದಿಯಲ್ಲಿರುವ ಓಣಿಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಿಸದೆ ಮೃತ್ಯು

0
IMG-20260908-WA0100

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆಯಲ್ಲಿ ರಸ್ತೆಯ ಬದಿಯಲ್ಲಿರುವ ಮನೆಯೊಂದರ ಪಕ್ಕದ ಓಣಿಯಲ್ಲಿ ಪತ್ತೆಯಾಗಿದ್ದ ನವಜಾತ ಗಂಡು ಶಿಶು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಸೆಪ್ಟೆಂಬರ್ 7ರ ಭಾನುವಾರ ಹೂಡೆಯ ಅಬ್ದುಲ್ ಶುಕೂರ್ ಅವರು ಮನೆಯಿಂದ ಹೊರಬಂದಾಗ, ತಮ್ಮ ಮನೆಯ ಪಕ್ಕದ ಓಣಿಯಲ್ಲಿ ಯಾವುದೇ ಬಟ್ಟೆಯಿಲ್ಲದೆ ಮುಖ ಕೆಳಮುಖವಾಗಿ ಮಲಗಿದ್ದ ನವಜಾತ ಶಿಶುವನ್ನು ಗಮನಿಸಿದ್ದಾರೆ. ಸ್ಥಳದಲ್ಲಿ ಮಗುವಿನ ಪೋಷಕರು ಅಥವಾ ಕುಟುಂಬದ ಯಾವುದೇ ಸದಸ್ಯರು ಕಂಡುಬಂದಿರಲಿಲ್ಲ.

ತಕ್ಷಣ ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದವರು ಪರಿಶೀಲಿಸಿದಾಗ ಮಗು ಜೀವಂತವಾಗಿರುವುದು ಕಂಡುಬಂದಿದೆ. ಮಗುವಿನ ಮುಖಕ್ಕೆ ಗಾಯವಾಗಿದ್ದು, ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು. ಕೂಡಲೇ ಮಗುವನ್ನು ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಆದರೆ, ಮಗುವಿನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಮೃತದೇಹವನ್ನು ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಗು ಮೃತಪಟ್ಟಿರುವುದು ಬಾಯಿಗೆ ಉಂಟಾದ ಗಾಯದಿಂದಾಗಿ ಸಂಭವಿಸಿದ ರಕ್ತಸ್ರಾವದಿಂದ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸುರಕ್ಷಾ ತಿಳಿಸಿದ್ದಾರೆ. ಮಗು ಪತ್ತೆಯಾಗುವ ಒಂದು ದಿನದ ಹಿಂದಷ್ಟೇ ಜನಿಸಿರಬಹುದು ಎಂದು ಶಂಕಿಸಲಾಗಿದೆ.

ಉತ್ತರ ಭಾರತದ ವಲಸೆ ಕಾರ್ಮಿಕರು ನವಜಾತ ಶಿಶುವನ್ನು ತ್ಯಜಿಸಿರುವ ಸಾಧ್ಯತೆ ಇದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!