ತ್ರಿಶೂರ್: ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು: 8 ಮಂದಿ ವಿದ್ಯಾರ್ಥಿಗಳು ದಾರುಣ ಮೃತ್ಯು
ತ್ರಿಶೂರ್: ಕೇರಳಂ ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕಿ ಹೊಡೆದಿದ್ದು ಭೀಕರ ರಸ್ತೆ ಅಪಘಾತ ಸಂಭವಿಸಿ ನೆರೆಯ ತಮಿಳುನಾಡಿನಿಂದ ಬಂದಿದ್ದ 8 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಭೀಕರ ಘಟನೆ ಶುಕ್ರವಾರ (ಸೆ.04 ರಂದು) ತಡರಾತ್ರಿ ನಡೆದಿದೆ.
ಶುಕ್ರವಾರ ತಡರಾತ್ರಿ ರಾತ್ರಿ 11:40 ರ ಸುಮಾರಿಗೆ ತ್ರಿಶೂರ್ ಜಿಲ್ಲೆಯ ಕೈಪಮಂಗಲಂ ಸಮೀಪದ ಪನಂಬಿಕ್ಕನ್ನು ಈ ಅಪಘಾತ ಸಂಭವಿಸಿದೆ. ತಡರಾತ್ರಿ ವೇಳೆ ಹೆಚ್ಚಿನ ವಾಹನ ಸಂಚಾರವಿಲ್ಲದೆ ಇದ್ದ ಸಮಯದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದ ಪರಿಣಾಮ ಕಾರಿನಲ್ಲಿದ್ದ ಎಲ್ಲಾ 8 ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಳಿಕ ತಕ್ಷಣವೇ ಸಹಾಯಕ್ಕೆ ಧಾವಿಸಿದ ಅಲ್ಲಿದವರು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದಾರೆ. ಈ ವೇಳೆ ಜಖಂಗೊಂಡಿದ್ದ ಕಾರಿನಲ್ಲಿ ಮೃತಪಟ್ಟಿದ್ದ ವಿದ್ಯಾರ್ಥಿಗಳು ಸಿಲುಕಿದ್ದ ಪರಿಣಾಮ ಆ ಕಾರನ್ನು ಕತ್ತರಿಸಿ ಮೃತದೇಹಗಳನ್ನು ಹೊರ ತೆಗೆದಿದ್ದು, ತ್ರಿಶೂರ್ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ 8 ಮಂದಿ ಮೃತರು ತಮಿಳುನಾಡಿನ ದಿಂಡಿಗಲ್‌ನಲ್ಲಿರುವ PSM ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದ್ದು, ಈ ವಿದ್ಯಾರ್ಥಿಗಳು ತಮಿಳುನಾಡು ನೋಂದಣಿ ಹೊಂದಿದ್ದ ಕಾರಿನಲ್ಲಿ ಗುರುವಾಯೂರು ಕಡೆಯಿಂದ ಕೊಡುಂಗಲ್ಲೂರು ಕಡೆಗೆ ಪ್ರಯಾಣಿಸುತ್ತಿದ್ದಾಗ, ಹೆದ್ದಾರಿಯ ನಿರ್ಮಾಣ ಹಂತದಲ್ಲಿರುವ ತಿರುವು ಮಾರ್ಗದಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಸದ್ಯ ಮೃತದೇಹಗಳ ಗುರುತು ಪತ್ತೆ ಹಚ್ಚುವ ಕಾರ್ಯವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.





