ಭಾರೀ ಮಳೆಗೆ ದೆಹಲಿ ಏರ್‌ಪೋರ್ಟ್ ಜಲಾವೃತ
ನವದೆಹಲಿ: ದೆಹಲಿಯಲ್ಲಿ ಭಾರೀ ಮಳೆಯಾಗಿದ್ದು, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಏರ್‌ಪೋರ್ಟ್ ಗೇಟ್‌ಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತಿದೆ. ಪ್ರಯಾಣಿಕರು ಮಳೆ ನೀರಿನ ನಡುವೆ ತಮ್ಮ ಲಗೇಜ್‌ಗಳನ್ನು ಸಾಗಿಸಲು ಪರದಾಡುವಂತಾಯಿತು.
ಭಾರತ ಹವಾಮಾನ ಇಲಾಖೆಯ (ಐಎಂಡಿ) ಮೂರು ಗಂಟೆಗಳ ಮಳೆಯ ಮಾಹಿತಿಯ ಪ್ರಕಾರ, ಪಾಲಂನಲ್ಲಿ ಬೆಳಗ್ಗೆ 11:30 ರಿಂದ ಮಧ್ಯಾಹ್ನ 2:30 ರ ನಡುವೆ 3.4 ಮಿ.ಮೀ ಮಳೆಯಾಗಿದ್ದರೆ, ನಜಾಫ್‌ಗಢದಲ್ಲಿ ಬೆಳಗ್ಗೆ 8:30 ರಿಂದ 11:30 ರ ನಡುವೆ 0.5 ಮಿ.ಮೀ ಮಳೆಯಾಗಿದೆ. ಇತರ ಹೆಚ್ಚಿನ ಮೇಲ್ವಿಚಾರಣಾ ಕೇಂದ್ರಗಳು ಈ ಅವಧಿಯಲ್ಲಿ ಯಾವುದೇ ಮಳೆಯನ್ನು ದಾಖಲಿಸಿಲ್ಲ.
ದೆಹಲಿಗೆ ಐಎಂಡಿ ಯೆಲ್ಲೋ ಅಲರ್ಟ್ ನೀಡಿದ್ದು, ಮಳೆಯಿಂದಾಗಿ ತಗ್ಗು ಪ್ರದೇಶಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಜನರು ಜಾಗರೂಕರಾಗಿರಲು ಸಲಹೆ ನೀಡಿದೆ.





