ಇರಾನ್ ಮೇಲೆ ದಾಳಿ ಬೆನ್ನಲ್ಲೇ ಜೋರ್ಡಾನ್‌ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ
ಅಮ್ಮಾನ್: ಹಾರ್ಮುಜ್ ಜಲಸಂಧಿಯ ಲಾರಕ್ ದ್ವೀಪದಲ್ಲಿದ್ದ ಇರಾನ್‌ನ ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಪಡೆಗಳು ನಡೆಸಿದ ದಾಳಿಗೆ ಪ್ರತೀಕಾರವಾಗಿ, ಇರಾನ್ ಭಾನುವಾರ ಜೋರ್ಡಾನ್‌ನಲ್ಲಿರುವ ಅಮೆರಿಕದ ಎರಡು ಪ್ರಮುಖ ವಾಯುನೆಲೆಗಳ ಮೇಲೆ ಭೀಕರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ.
ಜೋರ್ಡಾನ್‌ನ ‘ಕಿಂಗ್ ಹುಸೇನ್’ ಮತ್ತು ‘ಅಲ್-ಅಜ್ರಾಕ್’ ವಾಯುನೆಲೆಗಳಲ್ಲಿದ್ದ ಅಮೆರಿಕದ ತಾಂತ್ರಿಕ ಮೂಲಸೌಕರ್ಯ, ನಿರ್ವಹಣಾ ಸೌಲಭ್ಯಗಳು ಹಾಗೂ ಫೈಟರ್ ಜೆಟ್ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಕಟಿಸಿದೆ.
ಜಾಗತಿಕ ತೈಲ ಸಾರಿಗೆಯ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಬೆದರಿಕೆ ಒಡ್ಡುತ್ತಿದ್ದವು ಎಂಬ ಕಾರಣಕ್ಕೆ ಅಮೆರಿಕ ಮಿಲಿಟರಿಯು ಲಾರಕ್ ದ್ವೀಪದಲ್ಲಿದ್ದ ಇರಾನ್‌ನ ಎರಡು ರಾಕೆಟ್ ಲಾಂಚರ್‌ಗಳ ಮೇಲೆ ಎರಡು ಹಂತಗಳಲ್ಲಿ ದಾಳಿ ನಡೆಸಿ ಧ್ವಂಸಗೊಳಿಸಿತ್ತು. ಈ ಅಮೆರಿಕನ್ ದಾಳಿಯಲ್ಲಿ ತಮ್ಮ ಪಡೆಗಳಿಗೆ ಸಾವುನೋವು ಸಂಭವಿಸಿದೆ ಎಂದು ಐಆರ್‌ಜಿಸಿ ದೃಢಪಡಿಸಿತ್ತು. ಇದರ ಬೆನ್ನಲ್ಲೇ ಇರಾನ್ ಪ್ರತೀಕಾರದ ಕ್ರಮವಾಗಿ ಜೋರ್ಡಾನ್ ನೆಲೆಗಳನ್ನು ಗುರಿಯಾಗಿಸಿದೆ.
ದಾಳಿಯಿಂದಾಗಿ ನೆಲೆಗಳಿಗೆ ಭಾರಿ ಹಾನಿಯಾಗಿದೆ ಎಂದು ಇರಾನ್ ಪ್ರತಿಪಾದಿಸಿದೆಯಾದರೂ, ಜೋರ್ಡಾನ್‌ನ ವಾಯು ರಕ್ಷಣಾ ಪಡೆಗಳು ಇರಾನಿನ ಹೆಚ್ಚಿನ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿ ಹಿಮ್ಮೆಟ್ಟಿಸಿವೆ ಎಂದು ‘ಅಲ್ ಅರೇಬಿಯಾ’ ವರದಿ ಮಾಡಿದೆ. ಅಮೆರಿಕದ ದಾಳಿಯನ್ನು “ಘೋರ ತಪ್ಪು” ಎಂದು ಬಣ್ಣಿಸಿರುವ ಐಆರ್‌ಜಿಸಿ (IRGC) ವಕ್ತಾರ ಹೊಸೈನ್ ಮೊಹೆಬ್ಬಿ, “ಅಮೆರಿಕ ಆಡಳಿತವು ಆರ್ಥಿಕ ಹಾಗೂ ಮಿಲಿಟರಿ ರಂಗದಲ್ಲಿ ದೊಡ್ಡ ತಪ್ಪು ಮಾಡಿದೆ. ಆಕ್ರಮಣಕಾರರಿಗೆ ತಕ್ಕ ಶಿಕ್ಷೆ ವಿಧಿಸುವುದು ನಿಶ್ಚಿತ. ಅಮೆರಿಕ ಈ ಕೃತ್ಯಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ,” ಎಂದು ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ.





