August 31, 2026

ಗೆಳತಿಯಿಂದಲೇ ಇಬ್ಬರು ಕೇರಳ ಮೂಲದ ಮಹಿಳೆಯರ ಭೀಕರ ಹತ್ಯೆ

0
IMG-20260831-WA0068

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿ ಒಂದೇ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸಿಸುತ್ತಿದ್ದ ಕೇರಳ ಮೂಲದ ಇಬ್ಬರು ಮಲಯಾಳಿ ಮಹಿಳೆಯರನ್ನು ಅವರ ಆಪ್ತ ಗೆಳತಿಯೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಗಸ್ಟ್ 28 ರಂದು ನಡೆದಿದೆ.

ತ್ರಿಶೂರ್‌ನ ಮನ್ನುತ್ತಿ ಮುಡಿಕ್ಕೋಡ್‌ನ ಅಂಜನಾ ಹರಿ (35) ಹಾಗೂ ತಿರುವನಂತಪುರಂ ಕೇಶವದಾಸಪುರಂನ ಆನ್ ಮೇರಿ ಮ್ಯಾಥ್ಯೂ (40) ಕೊಲೆಯಾದ ದುರ್ದೈವಿಗಳು. ಕೊಲೆ ಆರೋಪದ ಮೇಲೆ ಅವರೊಟ್ಟಿಗೆ ಆಪ್ತವಾಗಿದ್ದ ಕೊಟ್ಟಾಯಂ ಮೂಲದ ಅನಿಲಾ (32) ಎಂಬಾಕೆಯನ್ನು ಮಿಲ್ಪಿಟಾಸ್ ಪೊಲೀಸರು ಬಂಧಿಸಿದ್ದಾರೆ.

ಅಂಜನಾ, ಆನ್ ಮೇರಿ ಹಾಗೂ ಆರೋಪಿ ಅನಿಲಾ ಮೂವರೂ ಮಿಲ್ ಕ್ರೀಕ್ ಅಪಾರ್ಟ್‌ಮೆಂಟ್‌ಗಳಲ್ಲೇ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಘಟನೆಗೆ ಹಿಂದಿನ ದಿನವಷ್ಟೇ ಮೂವರೂ ಒಟ್ಟಿಗೆ ಓಣಂ ಹಬ್ಬವನ್ನು ಆಚರಿಸಿ, ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಆದರೆ ಕೊಲೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಆಗಸ್ಟ್ 28 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆಸಿದ ಬಗ್ಗೆ ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ತೀವ್ರವಾಗಿ ಗಾಯಗೊಂಡಿದ್ದ ಅಂಜನಾ ಹರಿ ಶವವಾಗಿ ಪತ್ತೆಯಾಗಿದ್ದರು. ಪ್ರತ್ಯಕ್ಷದರ್ಶಿಗಳು ನೀಡಿದ ಸುಳಿವು ಆಧರಿಸಿ ನೀಲಿ ಬಣ್ಣದ ಎಸ್‌ಯುವಿ ಕಾರನ್ನು ಪತ್ತೆಹಚ್ಚಿದ ಪೊಲೀಸರು, ಅದರ ಚಾಲಕಿ ಅನಿಲಾಳನ್ನು ಬಂಧಿಸಿದರು.

Leave a Reply

Your email address will not be published. Required fields are marked *

error: Content is protected !!