ಭರವಸೆ ಈಡೇರಿಸದ ಕೇಂದ್ರ: ಸೆ. 5ರಂದು ದೆಹಲಿಯಲ್ಲಿ ಸಿಜೆಪಿಯಿಂದ ಯುವ ಸಮಾವೇಶ
ನವದೆಹಲಿ: ಜುಲೈ 25ರಂದು ಯುವಜನರಿಗೆ ನೀಡಿದ್ದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ‘ಶಾಂತಿಯುತ’ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.
ಸಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈ 25ರಂದು ನೀಡಿದ್ದ ಭರವಸೆಗಳ ಆಧಾರದ ಮೇಲೆ ದೇಶಾದ್ಯಂತ ನಡೆದ ಯುವಜನರ ಪ್ರತಿಭಟನೆಯನ್ನು ವಿಶ್ವಾಸದಿಂದ ಹಿಂಪಡೆಯಲಾಗಿತ್ತು. ಆದರೆ, ಒಂದು ತಿಂಗಳು ಕಳೆದರೂ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ವಿಳಂಬ ತಂತ್ರ ಅನುಸರಿಸುತ್ತಿದೆ ಎಂದು ಸಿಜೆಪಿ ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ನವದೆಹಲಿ ಪೊಲೀಸ್
ಪ್ರಧಾನ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ. ಮೃತಪಟ್ಟ ನೀಟ್ ಅಭ್ಯರ್ಥಿಗಳ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯದ ಸಂತ್ರಸ್ತರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದು, ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಯುವಜನರು ಭಾಗವಹಿಸಲಿದ್ದಾರೆ ಎಂದು ಅದು ತಿಳಿಸಿದೆ.
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸರ್ಕಾರ ಯುವಜನರಿಗೆ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ನಂಬಿ ದೇಶವ್ಯಾಪಿ ಚಳವಳಿಯನ್ನು ಹಿಂಪಡೆಯಲಾಗಿತ್ತು. ‘ಒಂದು ಪೀಳಿಗೆಯ ಸಂಪೂರ್ಣ ವಿಶ್ವಾಸವನ್ನು ಪಡೆದುಕೊಂಡು, ಆ ವಿಶ್ವಾಸದ ಆಧಾರದ ಮೇಲೆ ಯುವಜನರನ್ನು ಮನೆಗೆ ಕಳುಹಿಸಿ, ಬಳಿಕ ಸರ್ಕಾರ ತನ್ನದೇ ಮಾತಿನಿಂದ ಮೌನವಾಗಿ ಹಿಂದೆ ಸರಿಯುವುದನ್ನು ನಾವು ಒಪ್ಪುವುದಿಲ್ಲ’ ಎಂದು ಪಕ್ಷ ಹೇಳಿದೆ.





