ಜನಸೇನಾ ಸಂಸದರ ಪುತ್ರ ಚಲಾಯಿಸುತ್ತಿದ್ದ ಕಾರು ಡಿಕ್ಕಿ: ಮಹಿಳೆ ಮೃತ್ಯು
ಹೈದರಾಬಾದ್: ರಾಜ್ಯಸಭಾ ಸದಸ್ಯ ಲಿಂಗಮನೇನಿ ರಮೇಶ್ ಅವರ ಪುತ್ರ ಲಿಂಗಮನೇನಿ ಸಂಜುಷ್ (21) ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದು 26 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹೈದರಾಬಾದ್ ನ ಮಾದಾಪುರದಲ್ಲಿ ವರದಿಯಾಗಿದೆ.
ಮೃತರನ್ನು ಭಾರತೀ ಮುಖಿ ಎಂದು ಗುರುತಿಸಲಾಗಿದೆ. ಅವರು ಇನಾರ್ಬಿಟ್ ಮಾಲ್ ನ ಲೈಫ್ಸ್ಟೈಲ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 16ರಂದು ಮಾಧಾಪುರದಲ್ಲಿ ಕೆಲಸದ ಸ್ಥಳದ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರಾಬಾದ್ ಪೊಲೀಸರು ಸಂಜುಷ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಗುರುತಿಸಿದ್ದಾರೆ. ಅವರ ತಂದೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಸಂಜುಷ್ ಅವರನ್ನು ಇನ್ನೂ ಬಂಧಿಸಿಲ್ಲ.
ಮಾಧಾಪುರದ ಸಹಾಯಕ ಪೊಲೀಸ್ ಆಯುಕ್ತ ಸಿ.ಎಚ್. ಶ್ರೀಧರ್ ಅವರು ಸಂಜುಷ್ ಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ಜಾಮೀನು ನೀಡಬಹುದಾದ ಅಪರಾಧವಾಗಿದ್ದು, ಗರಿಷ್ಠ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಹಿನ್ನೆಲೆಯಲ್ಲಿ ಬಂಧಿಸಿಲ್ಲ ಎಂದು ಹೇಳಿದ್ದಾರೆ.





