August 21, 2026

ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರಕಾರ ಅನುಮತಿ ನಿರಾಕರಣೆ

0
IMG-20260821-WA0034

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಶುಕ್ರವಾರ ತಿಳಿಸಿದೆ. ಪ್ರಸ್ತುತ ಲಂಡನ್‌ನಲ್ಲಿರುವ ರೇವಂತ್‌ ರೆಡ್ಡಿ, ಅಮೆರಿಕ ಪ್ರವಾಸ ಮುಗಿಸಿ ಆಗಸ್ಟ್‌ 30ರಂದು ಹೈದರಾಬಾದ್‌ಗೆ ಮರಳಲು ಯೋಜಿಸಿದ್ದರು. ಆದರೆ, ಕೇಂದ್ರದಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಅವರ ಅಮೆರಿಕ ಪ್ರವಾಸ ರದ್ದಾಗಿದೆ.

ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ನೇತೃತ್ವದ ನಿಯೋಗವು ಲಂಡನ್‌ ಭೇಟಿಯ ಬಳಿಕ ಅಮೆರಿಕಕ್ಕೆ ತೆರಳಲು ಯೋಜಿಸಿತ್ತು. ರೇವಂತ್‌ ರೆಡ್ಡಿ ಅವರ 10 ದಿನಗಳ ಪ್ರವಾಸ ಗುರುವಾರ ಆರಂಭವಾಗಿದೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಬ್ಲಾವಟ್ನಿಕ್‌ ಸ್ಕೂಲ್‌ ಆಫ್‌ ಗವರ್ನಮೆಂಟ್‌ ಹಾಗೂ ಇಪಿಎಲ್‌ ಫುಟ್‌ಬಾಲ್‌ ಯೋಜನೆಯ ಭಾಗವಾಗಿ ಎಮಿರೇಟ್ಸ್‌ ಕ್ರೀಡಾಂಗಣಕ್ಕೆ ಭೇಟಿ ನೀಡಲು ಕಾರ್ಯಕ್ರಮ ನಿಗದಿಯಾಗಿತ್ತು. ಇದರೊಂದಿಗೆ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯ, ಲಂಡನ್‌ ವಿಶ್ವವಿದ್ಯಾಲಯ ಹಾಗೂ ಲಂಡನ್‌ ಬಿಸಿನೆಸ್‌ ಸ್ಕೂಲ್‌ ಪ್ರತಿನಿಧಿಗಳೊಂದಿಗೆ ಸಂವಾದ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಯೋಗ ಯೋಜಿಸಿತ್ತು.

ಬಳಿಕ ಅಮೆರಿಕದಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯ ಮತ್ತು ಮ್ಯಾಸಚೂಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (MIT) ಕ್ಯಾಂಪಸ್‌ಗಳಿಗೆ ಭೇಟಿ ನೀಡುವುದು, ಆಗಸ್ಟ್‌ 25ರಂದು ಬೋಸ್ಟನ್‌ನಲ್ಲಿ ವರ್ಜೀನಿಯಾ ಟೆಕ್‌ ವಿಶ್ವವಿದ್ಯಾಲಯದ ತಂಡದೊಂದಿಗೆ ಸಂವಾದ ನಡೆಸುವುದು ಹಾಗೂ ನ್ಯೂಯಾರ್ಕ್‌ನಲ್ಲಿ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಆಯೋಜಿಸಿದ್ದ ಭಾರತೀಯ ಅನಿವಾಸಿಗಳ ಸಭೆಯಲ್ಲಿ ಭಾಗವಹಿಸುವುದು ಪ್ರವಾಸದ ಭಾಗವಾಗಿತ್ತು.

ಆದರೆ, ಪ್ರವಾಸದ ನಡುವೆಯೇ ಕೇಂದ್ರ ಸರಕಾರದಿಂದ ಅಮೆರಿಕ ಭೇಟಿಗೆ ಅನುಮತಿ ನಿರಾಕರಿಸಿರುವ ಸಂದೇಶ ಬಂದಿದೆ. ಹೀಗಾಗಿ ರೇವಂತ್‌ ರೆಡ್ಡಿ ಅವರು ಲಂಡನ್‌ನಲ್ಲಿನ ಅಧಿಕೃತ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!