ಶಾರ್ಜಾ: ಕೇರಳ ಮೂಲದ 7 ವರ್ಷದ ಬಾಲಕಿ ಫ್ಲಾಟ್ ನಿಂದ ಬಿದ್ದು ಮೃತ್ಯು
ಶಾರ್ಜಾ: ಶಾರ್ಜಾದ ಮೂರನೇ ಮಹಡಿಯ ಫ್ಲ್ಯಾಟ್‌ನಿಂದ ಬಿದ್ದು 7 ವರ್ಷದ ಭಾರತೀಯ ಮೂಲದ ಬಾಲಕಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಮೃತ ಬಾಲಕಿಯನ್ನು ಸಫಾ ಮುಬಾರಕ್ ಎಂದು ಗುರುತಿಸಲಾಗಿದೆ. ಶಾರ್ಜಾದ ಅಲ್ ನಬ್ಬಾ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ಬಾಲಕಿ ಒಂಟಿಯಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ಅಜ್ಮಾನ್‌ನ ಶಾಲೆಯೊಂದರಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಫಾ, ಕೇರಳ ಮೂಲದ ದಂಪತಿಯ ಏಕೈಕ ಪುತ್ರಿಯಾಗಿದ್ದಳು.
ಶಾರ್ಜಾದ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮುರ್ಷಿದಾ ಮುಬಾರಕ್ ಕೆಲಸಕ್ಕೆ ತೆರಳಿದ್ದು, ಸಫಾ ಮನೆಯಲ್ಲಿ ಮಲಗಿದ್ದ ವೇಳೆ ಆಕೆಯ ತಂದೆ ಮುಬಾರಕ್ ಅಲಿ ಫ್ಲ್ಯಾಟ್‌ನಿಂದ ಕೆಳಗೆ ಬಂದು ತನ್ನ ಕಾರಿನತ್ತ ತೆರಳಿದ್ದರು. ಬಾಲಕಿ ಎಚ್ಚರಗೊಂಡ ಬಳಿಕ ಕಿಟಕಿಯ ಸ್ಲೈಡಿಂಗ್ ಬಾಗಿಲು ತೆರೆದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.
ದುಬೈನ ಆರೋಗ್ಯ ಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮುಬಾರಕ್ ಅಲಿ ಅವರು ಘಟನೆ ನಡೆದ ಸಂದರ್ಭದಲ್ಲಿ ಮನೆಯ ಕೆಳಭಾಗದಲ್ಲೇ ಇದ್ದರು ಎನ್ನಲಾಗಿದೆ.





