October 9, 2026

ಬೆಳಗಿನ ಉಪಾಹಾರ ಉಪ್ಪಿಟ್ಟಿನಲ್ಲಿ ಹಲ್ಲಿ ಪತ್ತೆ: 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

0
IMG-20260822-WA0021

ಗದಗ: ತಾಲೂಕಿನ ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದೆ.

ಶಾಲೆಯಲ್ಲಿ ಬೆಳಗಿನ ಉಪಾಹಾರವಾಗಿ ನೀಡಲಾಗಿದ್ದ ಉಪ್ಪಿಟ್ಟಿನಲ್ಲಿ ಹಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಇದನ್ನು ಗಮನಿಸಿದ ಸಿಬಂದಿ ತತ್ ಕ್ಷಣವೇ ಮಕ್ಕಳಿಗೆ ಉಪಾಹಾರ ನೀಡುವುದನ್ನು ಸ್ಥಗಿತಗೊಳಿಸಿದ್ದಾರೆ. ಅದಾಗಲೇ ಸುಮಾರು 80 ವಿದ್ಯಾರ್ಥಿಗಳು ಉಪ್ಪಿಟ್ಟು ಸೇವಿಸಿದ್ದರು.

 

ಉಪ್ಪಿಟ್ಟು ಸೇವಿಸಿದ ಬಳಿಕ ಕೆಲ ವಿದ್ಯಾರ್ಥಿಗಳಲ್ಲಿ ತಲೆನೋವು ಹಾಗೂ ವಾಂತಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಕೂಡಲೇ ಗ್ರಾಮಸ್ಥರು ಹಾಗೂ ಶಾಲಾ ಸಿಬಂದಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

‘ಹಲ್ಲಿ ಬಿದ್ದಿದ್ದ ಉಪ್ಪಿಟ್ಟು ಸೇವಿಸಿದ್ದರಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಗ್ರಾಮಸ್ಥರು ಹಾಗೂ ಶಾಲೆಯವರು ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ’ ಎಂದು ಗ್ರಾಮದ ಬಸವರಾಜ ಹಡಪದ ತಿಳಿಸಿದ್ದಾರೆ.

‘ಬೀಡನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉಪ್ಪಿಟ್ಟು ಸೇವಿಸಿದ ಸುಮಾರು 80 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಬಿಇಒ ಗಂಗಾಧರ ಅಣ್ಣಿಗೇರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!