August 22, 2026

ಬೆಳ್ತಂಗಡಿ: ಬಾಲಕ ಸುಮಂತ್ ಸಂಶಯಾಸ್ಪದ ಸಾವು ಪ್ರಕರಣಕ್ಕೆ: ಕುಟುಂಬಸ್ಥರಿಗೆ ಮಂಪರು ಪರೀಕ್ಷೆ, ಬ್ರೈನ್ ಮ್ಯಾಪಿಂಗ್

0
IMG-20260822-WA0024

ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ಸಂಭೋಳ್ಯದ 15 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣದ ನಿಗೂಢತೆಯನ್ನು ಭೇದಿಸಲು ಬೆಳ್ತಂಗಡಿ ಪೊಲೀಸರು ವೈಜ್ಞಾನಿಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ನ್ಯಾಯಾಲಯದ ಪೂರ್ವಾನುಮತಿ ಪಡೆದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ಮಂಪರು ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪ್ರಕರಣದ ಮೊದಲ ಹಂತದ ತನಿಖೆಗಾಗಿ ಸುಮಂತ್ ಅವರ ಕುಟುಂಬದ ಐವರನ್ನು ಈಗಾಗಲೇ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಆಗಸ್ಟ್ 10ರಂದು ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿ ಅವರನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ಸುಮಂತ್ ಅವರ ಸಹೋದರ ಸುದರ್ಶನ ಅವರನ್ನು ಮಧ್ಯಾಹ್ನದಿಂದ ಸಂಜೆವರೆಗೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಯಿತು.

ಆಗಸ್ಟ್ 11ರಂದು ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಹಾಗೂ ಸಂಬಂಧಿ ಲಕ್ಷ್ಮೀನಾರಾಯಣ ಅವರನ್ನು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಐವರು ನೀಡಿರುವ ಉತ್ತರಗಳನ್ನು ಪ್ರಕರಣದ ತನಿಖೆಯ ವೇಳೆ ಸಂಗ್ರಹಿಸಿರುವ ಮಾಹಿತಿಯೊಂದಿಗೆ ತಜ್ಞರು ಇದೀಗ ಹೋಲಿಕೆ ಮಾಡಿ ವಿಶ್ಲೇಷಿಸುತ್ತಿದ್ದಾರೆ.

ಸಂಬಂಧಪಟ್ಟವರಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯ ಮುಂದಿನ ಹಂತಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಗುರುತಿಸಲಾಗಿರುವ ಇತರ ಶಂಕಿತರನ್ನೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಸುಮಂತ್ ಅವರು ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದರು. 2026ರ ಜನವರಿ 14ರಂದು ಧನುಪೂಜೆಗೆ ತೆರಳುವ ವೇಳೆ ಸಮೀಪದ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಬೆಳಗ್ಗೆ ನಿಗೂಢವಾಗಿ ಮೃತಪಟ್ಟಿದ್ದರು.

ಸುಮಂತ್ ಅವರ ಸಾವು ಸಹಜವಲ್ಲ ಹಾಗೂ ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿರಬಹುದು ಎಂಬ ಅನುಮಾನಗಳು ಆರಂಭದಿಂದಲೇ ವ್ಯಕ್ತವಾಗಿದ್ದವು. ಪೊಲೀಸರು ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರೂ, ಪ್ರಕರಣದ ನಿಗೂಢತೆಗೆ ಈವರೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ಪ್ರಕರಣದಲ್ಲಿ ನಿಖರವಾಗಿ ಏನಾಯಿತು ಎಂಬುದು ಇನ್ನೂ ಬಯಲಾಗಬೇಕಿದೆ.

Leave a Reply

Your email address will not be published. Required fields are marked *

You may have missed

error: Content is protected !!