ಪುತ್ತೂರು: ಜೆರಾಕ್ಸ್ ಅಂಗಡಿಯಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ಹಲ್ಲೆ
ಪುತ್ತೂರು: ದರ್ಭೆಯಲ್ಲಿರುವ “Dream Destination Digital Seva Kendra” ಅಂಗಡಿಯಲ್ಲಿ ದಾಖಲಾತಿಗಳ Xerox ಹಾಗೂ Lamination ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಪರಸ್ಪರ ಹಲ್ಲೆ ನಡೆದ ಘಟನೆ ಶುಕ್ರವಾರ ನಡೆದಿದೆ.
ಸುಳ್ಯ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಅವರು ಪುತ್ತೂರು ದರ್ಭೆಯಲ್ಲಿರುವ ಅಂಜನಾ ಪೈ ಅವರ ಅಂಗಡಿಗೆ ಕೆಲವು ದಾಖಲಾತಿಗಳನ್ನು Xerox ಹಾಗೂ Lamination ಮಾಡಿಸಲು ನೀಡಿದ್ದರು. ಈ ವೇಳೆ ಒಂದು ದಾಖಲಾತಿ ತಾಂತ್ರಿಕ ದೋಷದಿಂದ ಸುಟ್ಟುಹೋಗಿದ್ದು, ಈ ವಿಚಾರವಾಗಿ ಮುಬಾಶಿರ, ಫಾತೀಮಾ, ಮುಬಾಶಿರ್ ಹಾಗೂ ಅಂಗಡಿ ಮಾಲಕಿ ಅಂಜನಾ ಪೈ ಮತ್ತು ಅವರ ಪುತ್ರ ಸುದರ್ಶನ್ ಪೈ ನಡುವೆ ವಾಗ್ವಾದ ನಡೆದಿದೆ. ಬಳಿಕ ಪರಸ್ಪರ ಹಲ್ಲೆ ನಡೆದಿರುವುದಾಗಿ ತಿಳಿದುಬಂದಿದೆ.
ಘಟನೆಯ ವೇಳೆ ಸ್ಥಳದಲ್ಲಿ ಜನರು ಗುಂಪುಗೂಡಿದ್ದು, ಮಾಹಿತಿ ಪಡೆದ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಎರಡೂ ಕಡೆಯವರಿಗೆ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಲಾಗಿದೆ.
ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆತರಲು ಪೊಲೀಸರು ಮುಂದಾದ ಸಂದರ್ಭದಲ್ಲಿ, ಸ್ಥಳದಲ್ಲಿ ಸೇರಿದ್ದ ಕೆಲವರು ಪೊಲೀಸರನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ದೂರು ಹಾಗೂ ಪ್ರತಿದೂರು ದಾಖಲಿಸಲಾಗುತ್ತಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಬಗ್ಗೆಯೂ ಪ್ರತ್ಯೇಕ ದೂರು ದಾಖಲಿಸಲಾಗುತ್ತಿದೆ. ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ದೂರುಗಳು ದಾಖಲಾಗಿದ ಬಳಿಕ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ನಡೆದ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದರ ದೃಶ್ಯಾವಳಿಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಸುಳ್ಳು ವದಂತಿ ಅಥವಾ ತಪ್ಪು ಮಾಹಿತಿಯನ್ನು ಪ್ರಸಾರ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದು, ಸುಳ್ಳು ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





