ಕಾಸರಗೋಡು: ಎಚ್1ಎನ್1 ಜ್ವರದಿಂದ ಮಂಗಳೂರು ಆಸ್ಪತ್ರೆಯಲ್ಲಿ ಮಹಿಳೆ ಮೃತ್ಯು
ಕಾಸರಗೋಡು: ಜಿಲ್ಲೆಯಲ್ಲಿ ಎಚ್1ಎನ್1 ವೈರಸ್ ಸೋಂಕಿನ ಆತಂಕ ಹೆಚ್ಚಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತರನ್ನು ಕಾಸರಗೋಡು ಜಿಲ್ಲೆಯ ಅಜನೂರು ಮಾಣಿಕೊಟ್ಟೆಯ ನಿವಾಸಿ ಯಶೋದಾ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಅವರಿಗೆ ತೀವ್ರ ಜ್ವರ ಹಾಗೂ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ, ಎಚ್1ಎನ್1 ಸೋಂಕಿನ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಯಶೋದಾ ಮೃತಪಟ್ಟಿದ್ದಾರೆ. ಈ ನಡುವೆ, ಯಶೋದಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು ಏಳು ಮಂದಿಯಲ್ಲಿ ಜ್ವರ ಹಾಗೂ ಕೆಮ್ಮಿನ ಲಕ್ಷಣಗಳು ಕಂಡುಬಂದಿವೆ. ಆರೋಗ್ಯ ಇಲಾಖೆ ತಕ್ಷಣವೇ ಅವರ ಗಂಟಲ ದ್ರವದ ಮಾದರಿಗಳನ್ನು ಸಂಗ್ರಹಿಸಿ, ಸೋಂಕು ದೃಢಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸಿದೆ.
ಘಟನೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಜನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಸೋಂಕು ಹರಡುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಅನಗತ್ಯವಾಗಿ ಜನಸಂದಣಿ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸುವಂತೆ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹಾಗೂ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮೊದಲಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪ್ರಯೋಗಾಲಯದ ಪರೀಕ್ಷಾ ವರದಿಯ ಬಳಿಕ ಸೋಂಕಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.




