ಬಂಟ್ವಾಳ: ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ
ಬಂಟ್ವಾಳ: ವೃದ್ಧೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಂಟ್ವಾಳ ಅಮ್ಮುಂಜೆ ನಿವಾಸಿ ಬೆನಡಿಕ್ಟ್ ಕಾರ್ಲೋ (73) ಅವರ ಆರೈಕೆ ನೋಡಿಕೊಳ್ಳುತ್ತಿದ್ದ ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23) ಚಿನ್ನಾಭರಣ ದೋಚುವ ಉದ್ದೇಶದಿಂದ ತನ್ನ ಸ್ನೇಹಿತ ಸತೀಶ ನಾಯಕ್ (28)ನೊಂದಿಗೆ ಸೇರಿ ವೃದ್ಧೆ ಸೇವಿಸುವ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿದ್ದಳು. ಆ ಯತ್ನ ವಿಫಲವಾದ ಬಳಿಕ ಚರಣ್ ಕುಮಾರ್ (31)ನ ಸಹಾಯದಿಂದ 2021ರ ಜನವರಿ 25ರಂದು ರಾತ್ರಿ ಬೆನಡಿಕ್ಟ್ ಕಾರ್ಲೋ ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದರು.
ಬಳಿಕ ಮೃತೆಯ ಬಳಿ ಇದ್ದ 61.070 ಗ್ರಾಂ ತೂಕದ, ಅಂದಿನ ಸುಮಾರು ₹3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ, ಪ್ರಕರಣದ ಸಾಕ್ಷ್ಯ ನಾಶಪಡಿಸಿದ್ದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ, ದರೋಡೆ, ಸಂಚು ಹಾಗೂ ಸಾಕ್ಷ್ಯ ನಾಶ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರ ನೇತೃತ್ವದಲ್ಲಿ ಆರಂಭಿಸಲಾಗಿದ್ದು, ಆಗಿನ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ತನಿಖೆ ಪೂರ್ಣಗೊಳಿಸಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಜುಲೈ 28, 2026ರಂದು ಮೂವರು ಆರೋಪಿಗಳನ್ನೂ ದೋಷಿಗಳೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದರು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.




