ಲಾವಣ್ಯ ಕೊಲೆ ಪ್ರಕರಣ : ಸಾಮಾಜಿಕ ಜಾಲತಾಣದಲ್ಲಿ ಕೋಮು ಬಣ್ಣ ಬಳಿಯುವ ಯತ್ನ ಆರೋಪ, ಬಲಪಂಥೀಯ ಪತ್ರಕರ್ತ ಕಿರಣ್ ಆರಾಧ್ಯ ವಿರುದ್ಧ ಪ್ರಕರಣ ದಾಖಲು
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡಿನಲ್ಲಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕೋಮು ಬಣ್ಣ ಬಳಿಯುವ ರೀತಿಯಲ್ಲಿ ಪೋಸ್ಟ್ ಪ್ರಕಟಿಸಿದ ಆರೋಪದಡಿ ಬಲಪಂಥೀಯ ಪತ್ರಕರ್ತ ಕಿರಣ್ ಆರಾಧ್ಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸಿರಾಜ್ ಮದಕ ಅವರ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಕ್ರ 100/2026 ಕಲಂ 353(2) BNS ರಂತೆ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ ಬಿ.ಸಿ ರೋಡಿನಲ್ಲಿ ಹತ್ಯೆಯಾದ ಉಳಿ ಗ್ರಾಮದ ಕಕ್ಯಪದವು ನಿವಾಸಿ ಲಾವಣ್ಯ ಅವರ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಈಗಾಗಲೇ ಗುರುತಿಸಿದ್ದು, ಆರೋಪಿಯ ಗುರುತಿನ ಕುರಿತು ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುವ ಹಾಗೂ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವ ಉದ್ದೇಶದಿಂದ ಪೋಸ್ಟ್ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಯಾವುದೇ ಸಮುದಾಯದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ ಆರೋಪಿಯ ಉಡುಪು ಮತ್ತು ಬಾಹ್ಯ ರೂಪವನ್ನು ಉಲ್ಲೇಖಿಸುವ ಮೂಲಕ ಆತ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಈ ಮೂಲಕ ಸಮಾಜದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಹಿನ್ನಲೆಯಲ್ಲಿ ಬಲಪಂಥೀಯ ಪತ್ರಕರ್ತ ಕಿರಣ್ ಆರಾಧ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ




