ವಿಟ್ಲ: ಪೇಟೆ ಅಗಲೀಕರಣ ವಿಚಾರದಲ್ಲಿ ಶನಿವಾರ ಶಾಸಕ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಕಟ್ಟಡ ಮಾಲಕರ ಸಭೆ: ಮತ್ತೆ ವಿಟ್ಲ ಪೇಟೆ ರಸ್ತೆ ಅಗಲೀಕರಣಕ್ಕೆ ನಮ್ಮ ಸಹಮತ ಇಲ್ಲ ಎಂದ ವಿಟ್ಲದ ಕಟ್ಟಡ ಮಾಲಕರು
ವಿಟ್ಲ: ವಿಟ್ಲ ಪೇಟೆ ಅಗಲೀಕರಣ ಸಂಬಂಧಿಸಿದಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಶನಿವಾರ ವಿಟ್ಲದ ಕಟ್ಟಡ ಮಾಲಕರ ಸಭೆ ಕರೆದಿದ್ದು, ವಿಟ್ಲ ರಸ್ತೆ ಅಗಳೀಕರಣಕ್ಕೆ ನಮ್ಮ ಸಹಮತ ಇಲ್ಲ ಎಂದು ವಿಟ್ಲದ ಕೈಗಾರಿಕಾ ಮತ್ತು ವಾಣಿಜ್ಯ ಸಂಘ ನಿರ್ಣಯ ಕೈಗೊಂಡಿದೆ.
ಈ ಬಗ್ಗೆ ಮನವಿ ಸಲ್ಲಿಸಲು ವಾಣಿಜ್ಯ ಸಂಘ ನಿರ್ದರಿಸಿದ್ದು, ಈ ಕೆಳನಂತೆ ಉಲ್ಲೇಖಿಸಲಾಗಿದೆ.
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆ ಬದಿಯ ಕಟ್ಟಡ ಮಾಲಕರೆಲ್ಲರನ್ನು ದಿನಾಂಕ 18/07/2026ರ ಸಭೆಗೆ ಭಾಗವಹಿಸುವ ಬಗ್ಗೆ ಉಲ್ಲೇಖಿತ ಸೂಚನಾ ಪತ್ರದ ಮೂಲಕ ಕೋರಿರುವುದಾಗಿದೆ. ನಾವು ತಮ್ಮ ಮುಂದೆ ತಿಳಿಸುವುದೇನೆಂದರೆ ತಮ್ಮ ಪ್ರಸ್ತಾವಿತ ವಿಟ್ಲ ಮುಖ್ಯ ರಸ್ತೆಗಳ ಅಗಲೀಕರಣಕ್ಕೆ ನಮ್ಮ ಸಹಮತ ಇರುವುದಿಲ್ಲ. ಕಾರಣ ನಾವು ಈಗಾಗಲೇ 2010ನೇ ಇಸವಿಯಲ್ಲಿ ಹೆಚ್ಚಿನ ಭೂ ಮಾಲಕರು, ವ್ಯಾಪಾರಸ್ಥರು, ನಾಗರಿಕರು ವಿಟ್ಲ ಮುಖ್ಯ ರಸ್ತೆಗಳ ಅಗಲೀಕರಣಕ್ಕೆ ಮಾನ್ಯ ಜಿಲ್ಲಾಧಿಕಾರಿಯವರ ಹಾಗೂ ಜನ ಪ್ರತಿನಿಧಿಗಳ ವಿನಂತಿ ಮೇರೆಗೆ ಯಾವುದೇ ಪ್ರತಿಫಲ ಪಡೆಯದೆ ಸ್ಥಳವನ್ನು ರಸ್ತೆ ಅಭಿವೃದ್ಧಿಗೆ ಬಿಟ್ಟುಕೊಟ್ಟಿದ್ದು, ಅದರಂತೆ ರಸ್ತೆ ಆಗಿರುತ್ತದೆ. ಭೂಮಾಲಕರಲ್ಲಿ ಉಳಿದ ಸ್ಥಳವನ್ನು ಅಭಿವೃದ್ಧಿಗೊಳಿಸಬಹುದೆಂದು ಅಂದಿನ ಮಾನ್ಯ ಜಿಲ್ಲಾಧಿಕಾರಿಯವರು ಹಾಗೂ ಜನಪತಿನಿಧಿಯವರು ಭೂಮಾಲಕರಿಗೆ ತಿಳಿಸಿದಂತೆ ಉಳಿಕೆ ಸ್ಥಳವನ್ನು ಹಣ ವ್ಯಯಿಸಿ ಅಭಿವೃದ್ಧಿ ಪಡಿಸಿರುವುದಾಗಿದೆ. ಈಗ ಪುನಃ ತಾವು ರಸ್ತೆ ಅಗಲೀಕರಣದ ಪ್ರಸ್ತಾಪ ಮಾಡಿರುವುದು ನಮಗೆ ನುಂಗಲಾರದ ತುತ್ತಾಗಿರುತ್ತದೆ.
ಪ್ರಸ್ತಾವಿತ ಅಗಲೀಕರಣ ಯೋಜನೆಯು ಕಾರ್ಯಗತಗೊಂಡಲ್ಲಿ ಅನೇಕ ಕಟ್ಟಡಗಳು ಭಾಗಶ: ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಲಿದ್ದು, ನಮ್ಮ ವ್ಯಾಪಾರ ಹಾಗೂ ಜೀವನೋಪಾಯಕ್ಕೆ ಗಂಭೀರ ಸ್ವರೂಪದ ಹೊಡೆತ ಉಂಟಾಗುತ್ತದೆ. ಈ ಪ್ರದೇಶವು ವಿಟ್ಲ ಪಟ್ಟಣದ ವಾಣಿಜ್ಯ ಕೇಂದ್ರವಾಗಿದ್ದು, ಕಟ್ಟಡಗಳನ್ನು ತೆರವುಗೊಳಿಸಿದರೆ ವ್ಯಾಪಾರ ಚಟುವಟಿಕೆಗಳು ತೀವ್ರ ಕುಂಠಿತಗೊಳಗಾಗುತ್ತದೆ.
ಈಗಾಗಲೇ ನಾವು ಕಳೆದ ಬಾರಿಯ ರಸ್ತೆ ಅಗಲೀಕರಣದ ವೇಳೆ ತುಂಬಾ ತೊಂದರೆ ಅನುಭವಿಸಿರುತ್ತೇವೆ. ನಮಗೆ ನಮ್ಮ ಜೀವನೋಪಾಯಕ್ಕೆ ಗಂಭೀರ ಸ್ವರೂಪದ ಉಂಟಾಗುವುದರಿಂದ ಈ ಮೇಲಿನ ರಸ್ತೆ ಅಗಲೀಕರಣದ ಪ್ರಸ್ತಾವನೆಯನ್ನು ಕೈಬಿಟ್ಟು ಬೈಪಾಸ್ ರಸ್ತೆಯಂತಹ ಪರ್ಯಾಯ ಯೋಜನೆಗಳನ್ನು ರೂಪಿಸುವರೆ ನಾವು ತಮ್ಮ ಮುಂದೆ ಒಕ್ಕೊರಳಿನಿಂದ ವಿನಂತಿಸುವುದಾಗಿದೆ ಎಂದು ವರ್ತಕರ ಸಂಘ ತಿಳಿಸಿದೆ.




