July 13, 2026

ಮಂಗಳೂರು: ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ 11 ಮಂದಿ ಬಾಂಗ್ಲಾದೇಶಿ ಪ್ರಜೆಗಳ ಬಂಧನ

0
image_editor_output_image-1432060036-1783963432990

ಮಂಗಳೂರು: ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಒಟ್ಟು 11 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.

ಬಂಧಿತ ವಿದೇಶಿ ಪ್ರಜೆಗಳ ಪೈಕಿ ಒಂದು ನಿರ್ಮಾಣ ಹಂತದ ಜಾಗದಲ್ಲಿ ಮೂವರು ಹಾಗೂ ಮತ್ತೊಂದು ಜಾಗದಲ್ಲಿ ಎಂಟು ಮಂದಿ ಅಕ್ರಮವಾಗಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ ಎಂದಿದ್ದಾರೆ. ಬಂಧಿತರೆಲ್ಲರೂ ಬಾಂಗ್ಲಾದೇಶದ ಢಾಕಾ ವಿಭಾಗದ ‘ರಾಜಶಾಹಿ’ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಸೇರಿದವರಾಗಿದ್ದಾರೆ.

ಮೊಹಮ್ಮದ್ ಕೌಸರ್ ಅಲಿ (21 ವರ್ಷ), ಮೊಹಮ್ಮದ್ ನೂರ್ ಅಮೀನ್ (34 ವರ್ಷ), ಮೊಹಮ್ಮದ್ ನಾಹಿದುಲ್ ಇಸ್ಲಾಂ (22 ವರ್ಷ), ಮೊಹಮ್ಮದ್ ಹುಮಾಯೂನ್ ಕಬೀರ್ (22 ವರ್ಷ), ಮೊಹಮ್ಮದ್ ರಂಜಾನ್ ಅಲಿ (23 ವರ್ಷ), ಮೊಹಮ್ಮದ್ ಅಬ್ದುಲ್ ರಹಮಾನ್ ರಾಯೆಲ್ (19 ವರ್ಷ), ಮೊಹಮ್ಮದ್ ನೋಯಾನ್ (24 ವರ್ಷ) ಬಂಧಿತರು. ಬಂಧಿತರಲ್ಲಿ ನಾಲ್ವರು ಅಪ್ರಾಪ್ತರಿದ್ದಾರೆ.

ಪೊಲೀಸರು ಬಿಡುಗಡೆ ಮಾಡಿರುವ ಅಧಿಕೃತ ಪಟ್ಟಿಯ ಪ್ರಕಾರ, ಬಂಧಿತ 11 ಮಂದಿಯಲ್ಲಿ 15, 16 ಹಾಗೂ 17 ವರ್ಷ ಪ್ರಾಯದ ನಾಲ್ಕು ಮಂದಿ ಅಪ್ರಾಪ್ತ ವಯಸ್ಕರು ಸೇರಿರುವುದು ಬೆಳಕಿಗೆ ಬಂದಿದೆ. ಇವರೆಲ್ಲರನ್ನೂ ಪಶ್ಚಿಮ ಬಂಗಾಳ ಮೂಲದ ಮಧ್ಯವರ್ತಿಯೊಬ್ಬ ಇತರ ರಾಜ್ಯಗಳ ಭಾರತೀಯ ಕಾರ್ಮಿಕರ ಜೊತೆಯಲ್ಲಿ ಮಂಗಳೂರಿಗೆ ಕರೆತಂದು ಕಟ್ಟಡ ನಿರ್ಮಾಣದ ಕೆಲಸಕ್ಕೆ ನಿಯೋಜಿಸಿದ್ದ ಎಂದು ಕಮಿಷನರ್ ತಿಳಿಸಿದ್ದಾರೆ.

ಬಾಂಗ್ಲಾದೇಶದ ಪ್ರಜೆಗಳನ್ನು ವಶದಲ್ಲಿಟ್ಟುಕೊಳ್ಳಲು ಹಾಗೂ ಅವರ ಸ್ವದೇಶಕ್ಕೆ ಮರಳಿ ಕಳುಹಿಸಲು ಅಗತ್ಯವಿರುವ ಕಾನೂನು ಆದೇಶಗಳನ್ನು ಹೊರಡಿಸುವಂತೆ ಕೋರಿ ‘ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ’ಗೆ (FRRO) ಶೀಘ್ರದಲ್ಲೇ ಅಧಿಕೃತ ವರದಿಯನ್ನು ರವಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸದ್ಯ ಬಂಧಿತರ ಬಳಿ ಇರುವ ದಾಖಲೆ ಪತ್ರಗಳ ಪರಿಶೀಲನೆ ಮತ್ತು ಸಂಗ್ರಹಣೆ ಪ್ರಕ್ರಿಯೆ ತೀವ್ರಗತಿಯಲ್ಲಿ ನಡೆಯುತ್ತಿದೆ.

ಭಾರತದ ಇತರ ರಾಜ್ಯಗಳ ಕಾರ್ಮಿಕರ ಜೊತೆಯಲ್ಲಿ ಇವರನ್ನು ಮಂಗಳೂರಿಗೆ ಕರೆತಂದು, ಕಟ್ಟಡ ನಿರ್ಮಾಣ ಕೆಲಸಕ್ಕೆ ನಿಯೋಜಿಸಿದ್ದ ಪಶ್ಚಿಮ ಬಂಗಾಳದ ಮುಖ್ಯ ದಲ್ಲಾಳಿ ವಿರುದ್ಧ ಉರ್ವಾ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!