ಬಿಸಿರೋಡು ಸರ್ಕಲ್ ಸಮೀಪ ರಸ್ತೆ ಬದಿಯಲ್ಲಿ ಹಾವು ಮೃತಪಟ್ಟಿದೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಸಂಗ್ರಹ ಯತ್ನ: ಸಾರ್ವಜನಿಕರ ಆಕ್ರೋಶ
ಬಂಟ್ವಾಳ : ಇತ್ತೀಚೆಗೆ ಕಲ್ಲಡ್ಕ–ವಿಟ್ಲ ಸಮೀಪದ ಕೆಲಿಂಜ ಪ್ರದೇಶದಲ್ಲಿ ನಾಗರ ಹಾವು ಸತ್ತಿದೆ ಎಂದು ನಂಬಿಸಿ ಸಾರ್ವಜನಿಕರಿಂದ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ, ಇದೀಗ ಬಂಟ್ವಾಳ ತಾಲೂಕಿನ ಬಿಸಿರೋಡು ಸರ್ಕಲ್ ಸಮೀಪ ಮತ್ತೊಂದು ಇಂತಹ ಘಟನೆ ಬೆಳಕಿಗೆ ಬಂದಿದೆ.
ಹೌದು… ಬಿಸಿರೋಡು ಸರ್ಕಲ್ ಸಮೀಪ ರಸ್ತೆ ಬದಿಯಲ್ಲಿ ಹಾವು ಮೃತಪಟ್ಟಿದೆ ಎಂದು ಹೇಳಿ ಐವರು, ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಮುಂದಾಗಿದ್ದ ಘಟನೆ ಸೋಮವಾರ ನಡೆದಿದೆ. ಈ ಘಟನೆ ಸ್ಥಳೀಯ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಿಸಿರೋಡು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಸ್ತೆಯಲ್ಲಿ ಮೂಡುಶೆಡ್ಡೆ ನಿವಾಸಿಗಳು ಎಂದು ಹೇಳಿಕೊಂಡಿದ್ದ ಐವರು ಜೆಸಿಬಿ ಕಾಮಗಾರಿ ವೇಳೆ ಹಾವು ಸಾವನ್ನಪ್ಪಿದೆ ಎಂದು ತಿಳಿಸಿ, ಬಿಳಿ ಬಟ್ಟೆಯಲ್ಲಿ ಹಾವನ್ನು ಇರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಮುಂದಾಗಿದ್ದರು.
ಅಲ್ಲದೆ, ಹಾವಿನ ಅಂತ್ಯಕ್ರಿಯೆಯನ್ನು ದೇವಸ್ಥಾನವೊಂದರಲ್ಲಿ ನೆರವೇರಿಸುವುದಾಗಿ ಹೇಳಿರುವುದೂ ತಿಳಿದುಬಂದಿದೆ. ಆದರೆ, ಈ ಎಲ್ಲ ಹೇಳಿಕೆಗಳಿಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಈ ನಡುವೆ ಸಂಚಾರ ನಿಯಂತ್ರಣದಲ್ಲಿದ್ದ ಟ್ರಾಫಿಕ್ ಸಿಬ್ಬಂದಿ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಹಾವನ್ನು ರಸ್ತೆ ಬದಿಯಿಂದ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಬದಿಯಲ್ಲಿ ಸೇರಿದ್ದ ಗುಂಪನ್ನು ಅಲ್ಲಿಂದ ತೆರಳುವಂತೆ ಸೂಚಿಸಿ ತೆರವುಗೊಳಿಸಿದ್ದಾರೆ. ಈ ಘಟನೆಯಲ್ಲಿ ನಿಜವಾಗಿಯೂ ಹಾವು ಅಪಘಾತದಲ್ಲಿ ಸಾವನ್ನಪ್ಪಿತ್ತೇ ಅಥವಾ ಅದರ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಪ್ರಯತ್ನ ನಡೆದಿತ್ತೇ ಎಂಬುದು ಈವರೆಗೆ ಅಧಿಕೃತವಾಗಿ ದೃಢಪಟ್ಟಿಲ್ಲ.
ಇನ್ನು ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆಯ ಬಳಿಕವೇ ಘಟನೆಯ ನಿಖರ ಮಾಹಿತಿ ತಿಳಿದುಬರಬೇಕಿದ್ದು, ಇಂತಹ ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸ್ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಸೂಕ್ತ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




