ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಎಂಜಿನಿಯರ್ ಸ್ನೇಹಿತರ ಕಾರು ಮರಕ್ಕೆ ಡಿಕ್ಕಿ: ನಾಲ್ವರು ಸ್ನೇಹಿತರು ಸ್ಥಳದಲ್ಲೇ ಮೃತ್ಯು
ಮಂಗಳೂರು/ಕಣ್ಣೂರು : ಅವರೆಲ್ಲ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕಣ್ಣೂರಿನತ್ತ ಬರುತ್ತಿದ್ದರು. ಆದರೆ, ವಿಧಿಯಾಟನೇ ಬೇರೆಯಾಗಿತ್ತು. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಮನೆ ತಲುಪಬೇಕಾಗಿದ್ದವರು ಮಸಣದ ಹಾದಿ ಹಿಡಿದಿದ್ದಾರೆ. ಈ ಘಟನೆ ನಡೆದಿರೋದು ಮಟ್ಟನ್ನೂರು ಬಳಿಯ ಕೂಡಲಿಯಲ್ಲಿ.
ಐದು ಮಂದಿ ಇಂಜಿನಿಯರಿಂಗ್ ಸ್ನೇಹಿತರು ಭಾನುವಾರ(ಜು.12) ನಡೆಯಬೇಕಿದ್ದ ಮದುವೆಗೆ ಶುಕ್ರವಾರ(ಜು.10) ಕಾರಿನಲ್ಲಿ ಹೊರಟಿದ್ದರು. ಪ್ರಯಾಣ ಬೆಳೆಸುವ ಮುನ್ನ ಕಾರಿನೊಳಗೆ ಐವರು ಒಟ್ಟಾಗಿ ಕಾರಿನಲ್ಲಿ ನಗುತ್ತಾ ಕ್ಲಿಕ್ಕಿಸಿಕೊಂಡ ಫೋಟೋವನ್ನು ಕಣ್ಣೂರಿನಲ್ಲಿದ್ದ ಸೋದರ ಸಂಬಂಧಿಗೆ ಕಳುಹಿಸಿದ್ದಾರೆ. ದುರಂತ ಅಂದ್ರೆ, ಆ ಯುವಕರಲ್ಲಿ ನಾಲ್ವರು ಜೀವಂತವಾಗಿ ಮನೆಗೆ ಬಾರದೇ ಇರೋದು.
ಕಾರು ಮಟ್ಟನ್ನೂರು ಬಳಿಯ ಕೂಡಲಿ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಓರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ಕಣ್ಣೂರಿನ ಅಲವಿಲ್ ನಿವಾಸಿ, ಶಾನ್ ಸಿರಾಜ್ (21), ಕಾಂಞಂಗಾಡ್‌ನ ಮೊಹಮ್ಮದ್ ರಿಜ್ವಾನ್ (21), ನವದೆಹಲಿಯ ಪರಮ ಛೆಟ್ರಿ (21) ಹಾಗೂ ಹೈದರಾಬಾದ್‌ನ ಹರ್ಷ್ ಸಥೂರಿ (21) ಮೃತಪಟ್ಟವರು. ತ್ರಿಶ್ಶೂರ್‌ನ ಆದಿತ್ಯ ಕೃಷ್ಣನ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅವರೆಲ್ಲ ವಿಎಸ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಫೇಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರು. ಕಳೆದ ಎರಡು ತಿಂಗಳ ಹಿಂದಷ್ಟೆ ಪದವಿ ಮುಗಿಸಿದ್ದರು. ಶಾನ್ ಸಿರಾಜ್‌ಗೆ ಬೆಂಗಳೂರಿನ ಇಂಜಿನಿಯರಿಂಗ್ ಸಂಸ್ಥೆಯೊಂದರಲ್ಲಿ ಇತ್ತೀಚೆಗೆ ಕೆಲಸ ಸಿಕ್ಕಿತ್ತು. ಉಳಿದವರು ಕೆಲಸ ಹುಡುಕುತ್ತಿದ್ದರು. ಆದರೆ, ಅಪಘಾತಕ್ಕೆ ಬಲಿಯಾಗಿದ್ದಾರೆ.
ಇನ್ನು ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ರಕ್ಷಣಾ ತಂಡ ಮತ್ತು ಪೊಲೀಸರು ಇಡೀ ವಾಹನವನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ಗಾಯಾಳುಗಳನ್ನು ಹೊರತೆಗೆಯಬೇಕಾಯಿತು. ಚಾಲಕ ನಿದ್ದೆಯ ಮಂಪರಿನಲ್ಲಿದ್ದುದ್ದೇ ಅಪ*ಘಾತ ಸಂಭವಿಸಲು ಕಾರಣ ಎಂದು ಶಂಕೆ ವ್ಯಕ್ತವಾಗಿದೆ.




