ಮಂಗಳೂರು: ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 6 ಮಂದಿ ಅಕ್ರಮ ಬಾಂಗ್ಲಾ ಪ್ರಜೆಗಳ ಬಂಧನ
ಮಂಗಳೂರು: ಕೂಲಿ ಕಾರ್ಮಿಕರಾಗಿ ಬಂದಿದ್ದ ಆರು ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಸುರತ್ಕಲ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುರತ್ಕಲ್ ಮುಕ್ಕದ ಖಾಸಗಿ ಆಸ್ಪತ್ರೆಯೊಂದರ ಕಟ್ಟಡದ ಕಾಮಗಾರಿಗೆಂದು ಇವರು ಜಿಲ್ಲೆಗೆ ಆಗಮಿಸಿದ್ದರು ಎನ್ನಲಾಗಿದೆ.
ಗುತ್ತಿಗೆದಾರನ ಮೂಲಕ ಆಗಮಿಸಿದ್ದ ಬಾಂಗ್ಲಾದೇಶ ಪ್ರಜೆಗಳು ಕಟ್ಟಡ ಕಾಮಗಾರಿಯಲ್ಲಿ ಭಾಗಿಯಾಗಿರುವ ಮಾಹಿತಿ ಸಿಕ್ಕ ಹಿನ್ನೆಲೆ ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಸದ್ಯ ಈ ಸಂಬಂಧ ವರದಿಯನ್ನು ಎಫ್‌ಆರ್‌ಆರ್‌ಒ (FRRO)ಗೆ ಪೊಲೀಸರು ಕಳುಹಿಸಿದ್ದು, ಬಂಧನ ಕುರಿತು ಆದೇಶ ಹೊರಡಿಸಿ ಭಾರತದಿಂದ ಗಡೀಪಾರು ಮಾಡಲು ಕ್ರಮಕ್ಕಾಗಿ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ಕಳುಹಿಸಿದ್ದಾರೆ.
FRRO ಅವರ ಬಂಧನಕ್ಕೆ ಅಗತ್ಯವಾದ ಆದೇಶಗಳನ್ನು ಹೊರಡಿಸುತ್ತದೆ ಮತ್ತು ಅವರನ್ನು ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.




