ಮಾಣಿ ಬಾಲವಿಕಾಸ ಶಾಲೆಯಲ್ಲಿ ವಿಶಿಷ್ಟ ವ್ಯವಸ್ಥೆ ಜಾರಿ: ಮಗು ಸುರಕ್ಷಿತವಾಗಿ ಶಾಲೆಗೆ ತಲುಪಿರುವುದು ಹಾಗೂ ಶಾಲೆಯಿಂದ ನಿರ್ಗಮಿಸುವ ಬಗ್ಗೆ ಮಾಹಿತಿ ಸಂಗ್ರಹ: ರಾಜ್ಯದಲ್ಲೇ ಮೊದಲ ಸಮಗ್ರ RFID ಆಧಾರಿತ ಡಿಜಿಟಲ್ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಿದ ಮಾಣಿ -ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ:
ಬಂಟ್ವಾಳ : ಶಿಕ್ಷಣವೆಂದರೆ ಕೇವಲ ಪಠ್ಯ ಬೋಧನೆ ಮಾತ್ರವಲ್ಲ- ವಿದ್ಯಾರ್ಥಿಗಳ ಸುರಕ್ಷತೆ, ಪೋಷಕರ ನೆಮ್ಮದಿ ಹಾಗೂ ತಂತ್ರಜ್ಞಾನದ ಸಮರ್ಥ ಬಳಕೆಯೂ ಅಷ್ಟೇ ಮುಖ್ಯ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಮಾಣಿ ಪೆರಾಜೆ ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ರಾಜ್ಯದಲ್ಲೇ ಮೊದಲ ಬಾರಿಗೆ ಸಮಗ್ರ RFID (Radio Frequency Identification) ಆಧಾರಿತ ಡಿಜಿಟಲ್ ವಿದ್ಯಾರ್ಥಿ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಡಿಜಿಟಲ್ RFID ಗುರುತಿನ ಚೀಟಿ (Digital ID) ನೀಡಲಾಗಿದ್ದು ,ವಿದ್ಯಾರ್ಥಿಗಳು ಶಾಲಾ ಪ್ರವೇಶದ್ವಾರದಲ್ಲಿರುವ RFID ಟರ್ನ್‌ಸ್ಟೈಲ್ ಗೇಟ್ ಮೂಲಕ ಒಳಪ್ರವೇಶಿಸುವಾಗ ಹಾಗೂ ಸಂಜೆ ಹೊರಬರುವಾಗ ತಮ್ಮ ಕಾರ್ಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಸ್ಕ್ಯಾನ್ ಆದ ಕ್ಷಣದಲ್ಲೇ ಸಂಬಂಧಿಸಿದ ಪೋಷಕರ ಮೊಬೈಲ್‌ಗೆ ಎಸ್‌ಎಂಎಸ್ ಮತ್ತು ನೋಟಿಫಿಕೇಶನ್ ತಲುಪುವುದರಿಂದ, ತಮ್ಮ ಮಗು ಸುರಕ್ಷಿತವಾಗಿ ಶಾಲೆಗೆ ತಲುಪಿರುವುದು ಹಾಗೂ ಶಾಲೆಯಿಂದ ನಿರ್ಗಮಿಸಿರುವುದು ಕ್ಷಣಾರ್ಧದಲ್ಲೇ ತಿಳಿಯುತ್ತದೆ.

ಬಸ್ಸಿನಲ್ಲಿಯೂ ಡಿಜಿಟಲ್ ವ್ಯವಸ್ಥೆ
ಮಕ್ಕಳು ಪಯಣಿಸುವ ಶಾಲಾ ಸಾರಿಗೆ ವ್ಯವಸ್ಥೆಯನ್ನೂ ಸಂಪೂರ್ಣ ಡಿಜಿಟಲ್ ಮಾದರಿಗೆ ಪರಿವರ್ತಿಸಲಾಗಿದೆ. ವಿದ್ಯಾರ್ಥಿಗಳು ಶಾಲಾ ಬಸ್ ಏರುವಾಗ ಮತ್ತು ಇಳಿಯುವಾಗ ಬಸ್‌ನಲ್ಲಿರುವ RFID ರೀಡರ್‌ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡುವುದು ಕಡ್ಡಾಯವಾಗಿದೆ. ಇದರಿಂದ ಯಾವ ವಿದ್ಯಾರ್ಥಿ ಯಾವ ಸಮಯದಲ್ಲಿ ಯಾವ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂಬ ಮಾಹಿತಿ ಸ್ವಯಂಚಾಲಿತವಾಗಿ ದಾಖಲಾಗುತ್ತದೆ ಜೊತೆಗೆ ಪೋಷಕರಿಗೂ ಈ ಬಗ್ಗೆ ಸಂದೇಶ ರವಾನೆಯಾಗುತ್ತದೆ. ಶಾಲೆಯಲ್ಲಿ 11 ನಿಯಮಿತ ಶಾಲಾ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಬಸ್‌ನಲ್ಲಿ ತಾಂತ್ರಿಕ ದೋಷ ಉಂಟಾದರೆ ಅಥವಾ ತುರ್ತು ಪರಿಸ್ಥಿತಿ ಎದುರಾದರೆ ವಿದ್ಯಾರ್ಥಿಗಳ ಸಂಚಾರಕ್ಕೆ ಅಡಚಣೆ ಆಗದಂತೆ ಒಂದು ಹೆಚ್ಚುವರಿ (ಬ್ಯಾಕ್‌ಅಪ್) ಬಸ್ ಸದಾ ಸನ್ನದ್ಧವಾಗಿರಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ಜೊತೆಗೆ ಸೇವೆಯ ನಿರಂತರತೆಯ ಮೇಲೂ ಶಾಲೆ ವಿಶೇಷ ಗಮನ ಹರಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಪ್ರತಿಯೊಂದು ಶಾಲಾ ಬಸ್‌ನಲ್ಲಿ CCTV ಕ್ಯಾಮೆರಾ, ಲೈವ್ GPS ಟ್ರ್ಯಾಕಿಂಗ್, ಸ್ಪೀಡ್ ಗವರ್ನರ್ ವ್ಯವಸ್ಥೆ ಹಾಗೂ ಮಹಿಳಾ ಸಿಬ್ಬಂದಿಯ ಉಪಸ್ಥಿತಿ ಕಡ್ಡಾಯಗೊಳಿಸಲಾಗಿದೆ. ಪೋಷಕರು ವಿಶೇಷ ಮೊಬೈಲ್ ಆ್ಯಪ್ ಮೂಲಕ ಬಸ್‌ನ ನೈಜ (Live) ಸ್ಥಳವನ್ನು ವೀಕ್ಷಿಸಿ, ಬಸ್ ಯಾವ ಸ್ಥಳದಲ್ಲಿದೆ ಹಾಗೂ ಎಷ್ಟು ಹೊತ್ತಿಗೆ ತಲುಪಲಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಈ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಹ್ಲಾದ ಜೆ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಆಡಳಿತ ಮಂಡಳಿ ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ ಯವರ ಪರಿಕಲ್ಪನೆ ಮತ್ತು ಮುತುವರ್ಜಿಯಲ್ಲಿ ಜಾರಿಗೊಳಿಸಲಾಗಿದ್ದು, ಪೋಷಕ ವಲಯದಲ್ಲಿ ವ್ಯಾಪಕ ಶ್ಲಾಘನೆ ಕೇಳಿಬಂದಿದೆ.
ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ತಲುಪುವವರೆಗೂ ಅವರ ಸುರಕ್ಷತೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯ ಮೇಲಿದೆ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ಈ ರೀತಿಯ ಸಮಗ್ರ ಡಿಜಿಟಲ್ ಸುರಕ್ಷತಾ ವ್ಯವಸ್ಥೆಯನ್ನು ಮೊದಲೇ ಅಳವಡಿಸಿಕೊಂಡಿರುವುದು ಅದರ ದೂರದೃಷ್ಟಿಯ ಆಡಳಿತವನ್ನು ಪ್ರತಿಬಿಂಬಿಸುತ್ತದೆ.
ಶಿಕ್ಷಣ, ತಂತ್ರಜ್ಞಾನ ಮತ್ತು ವಿದ್ಯಾರ್ಥಿ ಸುರಕ್ಷತೆಯನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸಿರುವ ಈ ವಿನೂತನ ವ್ಯವಸ್ಥೆಯ ಮೂಲಕ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ಮಾಣಿ–ಪೆರಾಜೆ ರಾಜ್ಯದ ಶಾಲೆಗಳಿಗೆ ಮಾದರಿಯಾಗಿದ್ದು, ಭವಿಷ್ಯದ “ಸ್ಮಾರ್ಟ್ ಮತ್ತು ಸುರಕ್ಷಿತ ಶಾಲೆ” ಎಂಬ ಪರಿಕಲ್ಪನೆಗೆ ಹೊಸ ಆಯಾಮ ನೀಡಿದೆ.
——————-
ಪ್ರಮುಖ ವೈಶಿಷ್ಟ್ಯಗಳು
* RFID ಟರ್ನ್‌ಸ್ಟೈಲ್ ಗೇಟ್ ಮೂಲಕ ಶಾಲಾ ಪ್ರವೇಶ ವ್ಯವಸ್ಥೆ.
* ಪ್ರತಿಯೊಂದು ಶಾಲಾ ಬಸ್ಸಿನಲ್ಲೂ RFID ರೀಡರ್ ಅಳವಡಿಕೆ.
* ವಿದ್ಯಾರ್ಥಿಗಳ ಸ್ವಯಂಚಾಲಿತ ಹಾಜರಾತಿ ದಾಖಲೆ.
* ಪೋಷಕರಿಗೆ ಕ್ಷಣಕ್ಷಣದ SMS ಹಾಗೂ ಮೊಬೈಲ್ ನೋಟಿಫಿಕೇಶನ್.
* ಅನಧಿಕೃತ ವ್ಯಕ್ತಿಗಳ ಶಾಲಾ ಪ್ರವೇಶಕ್ಕೆ ಪರಿಣಾಮಕಾರಿ ತಡೆ.
* ವಿದ್ಯಾರ್ಥಿಗಳ ಚಲನವಲನದ ನೈಜ ಸಮಯದ (Real-Time) ಮೇಲ್ವಿಚಾರಣೆ.
* ಹಾಜರಾತಿ ದಾಖಲಿಸುವಲ್ಲಿ ಮಾನವೀಯ ತಪ್ಪುಗಳಿಗೆ ಅವಕಾಶವಿಲ್ಲ.
* ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಿಗೆ ಸಂಪೂರ್ಣ ನೆಮ್ಮದಿ.
* ಶಾಲಾ ಬಸ್ ಸುರಕ್ಷತಾ ವ್ಯವಸ್ಥೆ
* CCTV ಕ್ಯಾಮೆರಾ ನಿಗಾ ವ್ಯವಸ್ಥೆ.
* Live GPS ಟ್ರ್ಯಾಕಿಂಗ್.
* ಸ್ಪೀಡ್ ಗವರ್ನರ್ ವ್ಯವಸ್ಥೆ.
* ಮಹಿಳಾ ಸಿಬ್ಬಂದಿಯ ಕಡ್ಡಾಯ ಉಪಸ್ಥಿತಿ.
* RFID ಆಧಾರಿತ ವಿದ್ಯಾರ್ಥಿಗಳ ಬಸ್ ಪ್ರವೇಶ ಮತ್ತು ನಿರ್ಗಮನ ದಾಖಲೆ.
—————–
ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಆಡಳಿತ ಮಂಡಳಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಬಗ್ಗೆ ಪೋಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
-ಸುದೀಪ್ ಕುಮಾರ್ ಶೆಟ್ಟಿ,
ಅಧ್ಯಕ್ಷರು ಶಿಕ್ಷಕ ರಕ್ಷಕ ಸಂಘ
ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ -ಪೆರಾಜೆ
——————
ವಿದ್ಯಾರ್ಥಿಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಈ ತಂತ್ರಜ್ಞಾನ ಅಳವಡಿಸಲಾಗಿದೆ.
ಮಹೇಶ್ ಶೆಟ್ಟಿ ಜೆ.
ಕಾರ್ಯದರ್ಶಿ,
ಬಾಲವಿಕಾಸ ಟ್ರಸ್ಟ್ ಮಾಣಿ
————-




