August 23, 2026

ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ ಚಾಕು ತೋರಿಸಿ ಯುವಕರಿಂದ ಬೆದರಿಕೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾ ಎಸ್ಪಿ: ದೂರು-ಪ್ರತಿದೂರು ದಾಖಲು- ಸುಳ್ಳು ಸುದ್ದಿ ಪ್ರಸಾರ ಮಾಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

0
first-information-report

ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪರಿಚಿತ ಯುವಕ ಚಾಕು ಹಿಡಿದು ನಿಂತಿದ್ದನ್ನು ಕಂಡು ಆತ ಹಾಗೂ ಆತನ ಸ್ನೇಹಿತರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಶಂಕಿಸಿದ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಪುತ್ತೂರಿನ ನಿವಾಸಿಯಾದ ಯುವತಿ ಬುಧವಾರ (ಜು. 8) ಬೆಳಿಗ್ಗೆ ಸುಮಾರು 6.45ಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ತನ್ನೊಂದಿಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಸೊಹೈಲ್ ಎಂಬಾತ ಚಾಕು ಹಿಡಿದು ನಿಂತಿರುವುದನ್ನು ಗಮನಿಸಿದ್ದಾರೆ. ಬಳಿಕ ಆತ ಹಾಗೂ ಆತನೊಂದಿಗೆ ಇದ್ದ ನಾಲ್ವರು ಸ್ನೇಹಿತರು ವಾಹನದಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಶಂಕಿಸಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ವಿಚಾರಣೆ ನಡೆಸಿದ ವೇಳೆ, ಸಂಬಂಧಿತ ಯುವಕರು ಬೇಕರಿಯಿಂದ ಬ್ರೆಡ್ ಖರೀದಿಸಿ ಅದಕ್ಕೆ ಚೀಸ್ ಹಚ್ಚಲು ಅಲ್ಲಿಂದ ಚಾಕು ಪಡೆದಿದ್ದಾಗಿ, ಬಳಿಕ ಅದನ್ನು ಹಿಂತಿರುಗಿಸಲು ತೆರಳುತ್ತಿದ್ದುದಾಗಿ ತಿಳಿಸಿದ್ದಾರೆ. ತಾವು ಯಾವುದೇ ಅಪರಾಧಿಕ ಕೃತ್ಯದಲ್ಲಿ ತೊಡಗಿಸಿಕೊಳ್ಳದೇ, ನಂತರ ಎಂದಿನಂತೆ ಜಿಮ್‌ಗೆ ತೆರಳಿದ್ದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಘಟನೆಯ ನೈಜ ಸಂಗತಿಗಳು ತಿಳಿದಿದ್ದರೂ ತಮ್ಮ ವಿರುದ್ಧ ದುರುದ್ದೇಶದಿಂದ ಯುವತಿಯ ಮೂಲಕ ಪ್ರಕರಣ ದಾಖಲಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿ ಸೊಹೈಲ್ ಹಾಗೂ ಇತರ ಯುವಕರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಮುರಳೀಕೃಷ್ಣ ಹಂಸತಡ್ಕ ಸೇರಿದಂತೆ ಇತರರ ವಿರುದ್ಧ ಆರೋಪ ಮಾಡಿದ್ದಾರೆ.

ಈ ಕುರಿತು ಮಹಿಳಾ ಪೊಲೀಸ್ ಠಾಣೆ ಹಾಗೂ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡೂ ಪ್ರಕರಣಗಳ ತನಿಖೆ ಮುಂದುವರಿದಿದ್ದು, ತನಿಖೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ, ಘಟನೆಯ ಕುರಿತು ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!