April 5, 2025

ಉಡುಪಿ: ಹಿಜಾಬ್ ಧರಿಸಿದ ಕಾರಣಕ್ಕೆ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಗಳನ್ನು ಕಾಲೇಜಿನಿಂದ ಹೊರ ಹಾಕಿದ ಪ್ರಾಂಶುಪಾಲ

0

ಉಡುಪಿ: ಹಿಜಾಬ್ ಹಾಕಿದ್ದಾರೆ ಎಂಬ ಕಾರಣಕ್ಕೆ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿರುವ ಘಟನೆ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ಹಿಂದು ಧರ್ಮದಲ್ಲಿ ಕುಂಕುಮ ಇಡುವಂತೆ ಮುಸ್ಲಿಂ ಧರ್ಮದಲ್ಲಿ ಹಿಜಾಬ್ ಹಾಕುತ್ತೇವೆ. ಇದಕ್ಕೆ ಇಲ್ಲಿ ವಿರೋಧಿಸಿದ್ದಾರೆ. ಸರಕಾರಿ ಶಾಲೆಯಲ್ಲಿಯೇ ಈ ರೀತಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಇದ್ಯಾವ ಸಮಾನತೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹಿಜಾಬ್ ಧರಿಸುವುದು ನಮ್ಮ ಸಂಸ್ಕೃತಿ. ನಮಗೆ ಹಿಜಾಬ್ ಧರಿಸಲು ಅನುಮತಿ ನೀಡಿ, ನಮಗೆ ನಮ್ಮ ಹಕ್ಕು ನೀಡಿ ಎಂದು ಕೇಳಿಕೊಂಡಿದ್ದಾರೆ. 3 ದಿನಗಳಿಂದ ಕಾಲೇಜಿಗೆ ಬರುತ್ತಿದ್ದೇವೆ‌ ಆದರೆ ನಮ್ಮನ್ನು ತರಗತಿಗೂ ಬಿಡುತ್ತಿಲ್ಲ. ಹಾಜರಾತಿಯೂ ನೀಡುತ್ತಿಲ್ಲ. 3 ದಿನಗಳಿಂದ ಹೊರಗೆ ಇದ್ದೇವೆ. ಈ ಬಗ್ಗೆ ಪೋಷಕರನ್ನು ಕರೆತನ್ನಿ ಎನ್ನುತ್ತಾರೆ. ಪೋಷಕರು ಬಂದರೆ ಅವರ ಬಳಿಯೂ ಮಾತನಾಡದೆ ಕೆಲಸದ ನೆಪ ಹೇಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

 

 

ಈ ವೇಳೆ ಕಾಲೇಜಿನಲ್ಲಿ ತುಂಬಾ ತಾರತಮ್ಯ ಮಾಡುತ್ತಿದ್ದಾರೆ. ಕಳೆದ ಮೂರು ದಿನದಿಂದ ನಮಗೆ ಹಾಜರಿ ಕೂಡಾ ನೀಡುತ್ತಿಲ್ಲ. ಅಲ್ಲದೆ ಹಿಜಾಬ್ ಹಾಕಿದ್ದೇವೆ ಎಂಬ ಕಾರಣಕ್ಕೆ ಶಿಕ್ಷಕರು ನಮ್ಮೊಂದಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಕಾಲೇಜಿನಲ್ಲಿ ಯಾವುದೇ ಭಾಷೆ ಮಾತನಾಡಲು ನಿರ್ಭಂದವಿಲ್ಲ. ಆದರೆ ಇತ್ತೀಚೆಗೆ ಶಿಕ್ಷಕ ಪ್ರಕಾಶ್ ವಿದ್ಯಾರ್ಥಿಗಳನ್ನು ಕರೆದು ಕಾಲೇಜು ಆವರಣದಲ್ಲಿ ಉರ್ದು, ಬ್ಯಾರಿ ಭಾಷೆ ಮಾತನಾಡುವಂತಿಲ್ಲ, ಸಲಾಮ್ ಮಾಡುವಂತಿಲ್ಲ ಹಾಗೂ ಯಾವುದೇ ಮುಸ್ಲಿಂ ಧರ್ಮದ ಆಚರಣೆ ಮಾಡುವಂತಿಲ್ಲ ಎಂದು ಹೇಳಿರೋದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.‌

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಲೇಜಿನ ಪ್ರಾಂಶುಪಾಲ ರುದ್ರೆಗೌಡ ಅವರು, ನಮ್ಮಲ್ಲಿ ಈವರೆಗೆ ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗುವ ನಿಯಮ ಇರಲಿಲ್ಲ. ಕಳೆದ ಮೂರು ದಿನಗಳಿಂದ ಸುಮಾರು 60 ಮಂದಿ ವಿದ್ಯಾರ್ಥಿಗಳಲ್ಲಿ ಕೆಲವು ಮಂದಿ ಮಾತ್ರ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಅವರ ಮನೆಯವರನ್ನು ಕರೆದು ಮಾತುಕತೆ ಮಾಡಿದ್ದೇವೆ ಅವರೆಲ್ಲರೂ ಅರ್ಥ ಮಾಡಿಕೊಂಡು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!