ನಾಟೆಕಲ್: ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಅಪಘಾತ; ಬಸ್ಸಿನಡಿ ಸಿಲುಕಿಕೊಂಡಿದ್ದ ಬೈಕ್ ಸವಾರ ಮೃತ್ಯು
Oplus_16908288
ಉಳ್ಳಾಲ: ವಿದ್ಯಾರ್ಥಿಗಳನ್ನು ಒಯ್ಯುತ್ತಿದ್ದ ಖಾಸಗಿ ಕಾಲೇಜು ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದ ಪರಿಣಾಮ ಬಸ್ಸಿನಡಿಯಲ್ಲಿ ಸಿಲುಕಿದ್ದ ಸ್ಕೂಟರ್ ಚಾಲಕ ಯುವಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ದೇರಳಕಟ್ಟೆ ಸಮೀಪದ ನಾಟೆಕಲ್ ತಿರುವಿನಲ್ಲಿ ನಡೆದಿದೆ.
ಮುಡಿಪು,ಕಂಬಳಪದವಿನ ಇನ್ಪೋಸಿಸ್ ಉದ್ಯೋಗಿ ಚಿಕ್ಕಮಗಳೂರು ಮೂಲದ ನಿವಾಸಿ ಪ್ರಜ್ವಲ್ ಅರ್ನಾಲ್ಡ್ (30) ಸಾವನ್ನಪ್ಪಿದ ಯುವಕ. ಪ್ರಜ್ವಲ್ ತನ್ನ ಸಹೋದ್ಯೋಗಿ ಯುವತಿ ಸಾಗರದ ನಿವಾಸಿ ಅಕ್ಷತಾಳೊಂದಿಗೆ ಇಂದು ಸಂಜೆ ಸ್ಕೂಟರಿನಲ್ಲಿ ಕಂಬಳ ಪದವಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ನಡುಪದವಿನ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದ್ದು, ಈ ವೇಳೆ ಬಸ್ಸಿನಡಿಗೆ ಸ್ಕೂಟರ್ ಕೂಡ ಸಿಲುಕಿಕೊಂಡಿದೆ.
ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ತಕ್ಷಣ ಕ್ರೇನ್ ತರಿಸಿ ಬಸ್ಸನ್ನು ಮೇಲಕ್ಕೆತ್ತಿದ್ದು, ಸ್ಕೂಟರ್ ಸವಾರ ಪ್ರಜ್ವಲ್ ಮತ್ತು ಅಕ್ಷತಾರನ್ನು ಹೊರಗೆಳೆದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಹ್ಯವಾಗಿ ದೇಹದಲ್ಲಿ ಗಂಭೀರ ಗಾಯಗಳಿಲ್ಲದಿದ್ದರೂ ಆಂತರಿಕವಾಗಿ ಪೆಟ್ಟು ಬಿದ್ದು ಪ್ರಜ್ವಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸ್ಕೂಟರ್ ಸಹ ಸವಾರೆಯಾಗಿದ್ದ ಅಕ್ಷತಾಗೆ ಚಿಕಿತ್ಸೆ ಮುಂದುವರಿದಿದ್ದು ಆಕೆ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.
ಬಸ್ಸಿನಡಿಗೆ ಸಿಲುಕಿದ ಸ್ಕೂಟರ್ ಸಂಪೂರ್ಣ ಅಪ್ಪಚ್ಚಿಗೊಂಡಿದೆ. ಘಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಸ್ತಬ್ದಗೊಂಡಿತ್ತು. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.




