June 7, 2026

ಗ್ರಾಹಕರಿಗೆ ಮತ್ತೊಮ್ಮೆ ಶಾಕ್: ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ

0
LPG_d559f7.jpg

ನವದೆಹಲಿ: ಇತ್ತೀಚೆಗಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿ ಹೋಟೆಲ್ ತಿಂಡಿ-ತಿನಿಸುಗಳು ದುಬಾರಿಯಾಗಲಿವೆ ಎಂಬ ಆತಂಕದ ಬೆನ್ನಲ್ಲೇ, ಈಗ ಜನಸಾಮಾನ್ಯರ ಅಡುಗೆಮನೆಗೂ ತೈಲ ಕಂಪನಿಗಳು ಭಾರಿ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ಆರುವ ಮುನ್ನವೇ ಇದೀಗ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಕೂಡ ದಿಢೀರ್ ಹೆಚ್ಚಿಸಲಾಗಿದೆ.

ಗೃಹಬಳಕೆಯ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ 29 ರೂಪಾಯಿ ಹೆಚ್ಚಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಗೃಹಬಳಕೆಯ ಅಡುಗೆ ಅನಿಲ ದುಬಾರಿಯಾದಂತಾಗಿದೆ. ಈ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಎಲ್‌ಪಿಜಿ ದರ 913 ರೂಪಾಯಿಯಿಂದ 942 ರೂಪಾಯಿಗೆ ಹೆಚ್ಚಿದಂತಾಗಿದೆ.

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮತ್ತು ಅನಿಲ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವ ನಡುವೆಯೇ ಅನಿಲ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಪರಿಷ್ಕರಣೆ ದೇಶಾದ್ಯಂತ ಜೂನ್ 7ರಿಂದಲೇ ಜಾರಿಗೆ ಬರಲಿದ್ದು, ಸ್ಥಳೀಯ ತೆರಿಗೆಗಳು ಮತ್ತು ಸಾಗಾಣಿಕೆ ವೆಚ್ಚದಿಂದಾಗಿ ಬೇರೆ ಬೇರೆ ನಗರಗಳಲ್ಲಿ ಚಿಲ್ಲರೆ ಮಾರಾಟ ದರ ವ್ಯತ್ಯಯವಾಗಲಿದೆ.

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆ ವ್ಯವಸ್ಥೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಮಾರ್ಚ್ 7ರಂದು ಎಲ್‌ಪಿಜಿ ಸಿಲಿಂಡರ್ ದರವನ್ನು 60 ರೂಪಾಯಿ ಹೆಚ್ಚಿಸಲಾಗಿತ್ತು. ಆದರೆ ಈ ಹೆಚ್ಚಳ ಎಲ್‌ಪಿಜಿ ದೇಶೀಯ ಮಾರಾಟದಿಂದ ಉಂಟಾಗುತ್ತಿರುವ ಒಟ್ಟು ನಷ್ಟದ ಒಂದು ಭಾಗ ಮಾತ್ರ ಆಗಿದೆ ಎಂದು ಉದ್ಯಮ ಮೂಲಗಳು ಹೇಳಿವೆ.

ಪೆಟ್ರೋಲ್ ಹಾಗೂ ಡೀಸೆಲ್ ಕೂಡಾ ತುಟ್ಟಿಯಾಗಿರುವ ಸಂದರ್ಭದಲ್ಲೇ ಎಲ್‌ಪಿಜಿ ದರ ಕೂಡಾ ಹೆಚ್ಚಳವಾಗಿದೆ. ಮೇ ಮಧ್ಯಭಾಗದ ವರೆಗೆ ಪೆಟ್ರೋಲ್ ದರವನ್ನು ಲೀಟರ್ ಗೆ 7.50 ರೂಪಾಯಿ ಹಾಗೂ ಸಿಎನ್‌ಜಿ ದರವನ್ನು ಕೆ.ಜಿ.ಗೆ 6 ರೂಪಾಯಿಯಷ್ಟು ಹೆಚ್ಚಿಸಲಾಗಿತ್ತು. ಈ ಹೆಚ್ಚಳದ ನಡುವೆಯೂ ವಾಸ್ತವ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಪೆಟ್ರೋಲ್- ಡೀಸೆಲ್ ಮಾರಾಟ ಮಾಡಲಾಗುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಲ್ಲಿ 11 ರೂಪಾಯಿ ಹಾಗೂ ಡೀಸೆಲ್ ಮಾರಾಟದಲ್ಲಿ 33.6 ರೂಪಾಯಿ ನಷ್ಟವಾಗುತ್ತಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!