ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ: ಒಂದೇ ಕುಟುಂಬದ 8 ಮಂದಿ ಸೇರಿದ ಕನಿಷ್ಠ 21 ಜನರು ಸಜೀವ ದಹನ
ನವದೆಹಲಿ: ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ಹೌಜ್ ರಾಣಿ ಪ್ರದೇಶದ ‘ಫ್ಲೋರಿಶ್ ಸ್ಟೇ’ ಬೆಡ್-ಅಂಡ್ ಬ್ರೇಕ್‌ಫಾಸ್ಟ್ ಹೋಟೆಲ್‌ನಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಎಂಟು ಸದಸ್ಯರು ಸೇರಿದಂತೆ ಕನಿಷ್ಠ 21 ಜನರು ಧಗಧಗಿಸುವ ಬೆಂಕಿಗೆ ಆಹುತಿಯಾಗಿದ್ದಾರೆ.
ಮೃತರ ಪೈಕಿ 12 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ ಎಂದು ದೆಹಲಿ ಪೊಲೀಸರು ಖಚಿತಪಡಿಸಿದ್ದಾರೆ.
ಗುರುಗ್ರಾಮದ ಸೆಕ್ಟರ್ 46 ರ ನಿವಾಸಿಯಾಗಿದ್ದ ಚಾರ್ಟರ್ಡ್ ಅಕೌಂಟೆಂಟ್ (CA) ವಿವೇಕ್ ಅಗರ್ವಾಲ್ ಅವರು ಪ್ರಸ್ತುತ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ 80 ವರ್ಷದ ತಂದೆ ರಾಧೆ ಶ್ಯಾಮ್ ಅಗರ್ವಾಲ್ ಅವರನ್ನು ಭೇಟಿ ಮಾಡಲು ಕುಟುಂಬದೊಂದಿಗೆ ದೆಹಲಿಗೆ ಬಂದಿದ್ದರು.
ವಿವೇಕ್ ಅಗರ್ವಾಲ್, ಅವರ ಪತ್ನಿ ತರ್ಜನಿ ಅಗರ್ವಾಲ್, ಹೆಣ್ಣುಮಕ್ಕಳಾದ ಜೀವಿಶಾ, ವರ್ಯಾ ಮತ್ತು ಇತರ ನಾಲ್ವರು ಸಂಬಂಧಿಕರು ಫ್ಲೋರಿಶ್ ಸ್ಟೇ ಹೋಟೆಲ್‌ನಲ್ಲಿ ತಂಗಿದ್ದರು. ಬುಧವಾರ ಬೆಳಿಗ್ಗೆ ಇಡೀ ಕುಟುಂಬ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸುತ್ತಿದ್ದ ಸಮಯದಲ್ಲೇ ಈ ದುರಂತ ಸಂಭವಿಸಿದೆ. ಬೆಂಕಿಯ ಜ್ವಾಲೆಗೆ ಸಿಲುಕಿ ಕುಟುಂಬದ ಎಂಟೂ ಸದಸ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 80 ವರ್ಷದ ವೃದ್ಧ ತಂದೆ ಮಾತ್ರ ಈ ಕುಟುಂಬದಲ್ಲಿ ಬದುಕುಳಿದ ಏಕೈಕ ಸದಸ್ಯರಾಗಿದ್ದಾರೆ. ಮೃತದೇಹಗಳು ಸಂಪೂರ್ಣ ಸುಟ್ಟು ಹೋಗಿರುವುದರಿಂದ, ಡಿಎನ್‌ಎ (DNA) ಮಾದರಿ ಸಂಗ್ರಹಿಸಿದ ನಂತರವೇ ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ ಸುಮಾರು 8.30 ರ ಸುಮಾರಿಗೆ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಐದು ಅಂತಸ್ತಿನ ಕಿರಿದಾದ ಕಟ್ಟಡದಾದ್ಯಂತ ಕ್ಷಣಾರ್ಧದಲ್ಲಿ ಹರಡಿದೆ. ಬೆಂಕಿ ಹೊತ್ತಿಕೊಂಡಾಗ ಹೋಟೆಲ್‌ನಲ್ಲಿ 12 ವಿದೇಶಿಗರು ಸೇರಿದಂತೆ ಸುಮಾರು 40 ಅತಿಥಿಗಳು ಇದ್ದರು, ಅವರಲ್ಲಿ ಹೆಚ್ಚಿನವರು ನಿದ್ರಿಸುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಡಜನ್‌ಗೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





