ಮಂಗಳೂರು: ಇಂದಿನಿಂದ ಮೀನುಗಾರಿಕೆ ಚಟುವಟಿಕೆಗಳು ಬಹುತೇಕ ಸ್ಥಗಿತ: 61 ದಿನಗಳ ಕಾಲ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕೆ ಇಳಿಯದಂತೆ ನಿರ್ಬಂಧ
ಮಂಗಳೂರು: ಪಶ್ಚಿಮ ಕರಾವಳಿಯುದ್ದಕ್ಕೂ ಮೀನುಗಾರಿಕೆ ಚಟುವಟಿಕೆಗಳು ಇಂದಿನಿಂದ ಬಹುತೇಕ ಸ್ಥಗಿತಗೊಳ್ಳಲಿವೆ. ಮಳೆಗಾಲವು ಮೀನುಗಳ ಸಂತಾನೋತ್ಪತ್ತಿಯ ಕಾಲವಾಗಿದೆ. ಅವುಗಳ ರಕ್ಷಣೆಗಾಗಿ 61 ದಿನಗಳ ಕಾಲ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕೆ ಇಳಿಯದಂತೆ ನಿರ್ಬಂಧಿಸಲಾಗಿದೆ.
ಹೆಚ್ಚಿನ ಕಡಲ ಪ್ರಭೇದಗಳು ಮೊಟ್ಟೆಯಿಡುತ್ತವೆ. ಹೀಗಾಗಿ ಮುಂಗಾರು ತಿಂಗಳುಗಳಲ್ಲಿ ಮೀನುಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಈ ನಿಷೇಧವನ್ನು ಹೇರಲಾಗಿದೆ. ಈ ಅವಧಿಯಲ್ಲಿ ಯಾಂತ್ರೀಕೃತ ದೋಣಿಗಳ ಕಾರ್ಯಾಚರಣೆಯು ಮೀನಿನ ಸಂತಾನೋತ್ಪತ್ತಿಗೆ ಅಡ್ಡಿಪಡಿಸಬಹುದು ಮತ್ತು ಭವಿಷ್ಯದ ಮೀನುಗಾರಿಕೆಯ ಮೇಲೆ ಭಾರಿ ಹೊಡೆತ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಯಾಂತ್ರಿಕ ದೋಣಿಗಳು ಸಮುದ್ರಕ್ಕೆ ಇಳಿದರೆ ಮೀನುಗಳ ಸಂತಾನೋತ್ಪತ್ತಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆ ದ.ಕ. ಜಿಲ್ಲೆಯಲ್ಲಿ 61 ದಿನಗಳ ಕಾಲ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಹೆಚ್ಚಿನ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳು ಮುಂದಿನ ಎರಡು ತಿಂಗಳ ಕಾಲ ಸ್ಥಗಿತಗೊಳ್ಳುವ ನಿರೀಕ್ಷೆಯಿದೆ.





