ಬಂಟ್ವಾಳ: ಮನೆಯಲ್ಲಿ ದೈವಿಕ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಚಿಕ್ಕಪ್ಪನ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಕೊಲೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ಅತ್ಯಂತ ಆಘಾತಕಾರಿ ಘಟನೆಯೊಂದು ಸಂಭವಿಸಿದೆ.
ಮನೆಯಲ್ಲಿ ದೈವಿಕ ಕಾರ್ಯಕ್ರಮ ನಡೆಯುತ್ತಿದ್ದಾಗಲೇ, ಮದ್ಯದ ಅಮಲಿನಲ್ಲಿ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಯುವಕನೋರ್ವ ತನ್ನ ಸ್ವಂತ ಚಿಕ್ಕಪ್ಪನ ಕುತ್ತಿಗೆಗೇ ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದಿದ್ದಾನೆ.
ಇಲ್ಲಿನ ನಿವಾಸಿ ಮಧುಸೂಧನ ( 38) ಅವರು ಮೃತಪಟ್ಟವರಾಗಿದ್ದು, ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಕೊಲೆಗೈದವನಾಗಿದ್ದಾನೆ.
ಕಾಡಬೆಟ್ಟು ನಿವಾಸಿ ಕೇಶವ ಪೂಜಾರಿ ಅವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ‘ತಂಬಿಲ’ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23 ವರ್ಷ) ಮತ್ತು ಆತನ ಸ್ನೇಹಿತರು ಮನೆಯಿಂದ ಹೊರಗಡೆ ಮದ್ಯಸೇವನೆ ಮಾಡಿ ಜೋರಾಗಿ ಗದ್ದಲ ಎಬ್ಬಿಸುತ್ತಿದ್ದರು. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದರಿಂದ ಹೊರಗೆ ಗಲಾಟೆ ಮಾಡದಂತೆ ರಾಹುಲ್‌ನ ಚಿಕ್ಕಪ್ಪ, ಇಲೆಕ್ಟ್ರಿಷಿಯನ್ ಆಗಿದ್ದ ಮಧುಸೂಧನ (38 ವರ್ಷ) ಅವರು ಆಕ್ಷೇಪ ವ್ಯಕ್ತಪಡಿಸಿ ಬುದ್ಧಿವಾದ ಹೇಳಿದ್ದಾರೆ.





