May 26, 2026

ಮಂಗಳೂರು: “ಟ್ಯಾಬ್ಲೆಟ್ ಆರೀಫ್” ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

0
image_editor_output_image717011068-1779777109226.jpg

ಮಂಗಳೂರು: ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರಿಫ್ ಹುಸೈನ್ ಅಲಿಯಾಸ್ “ಟ್ಯಾಬ್ಲೆಟ್ ಆರೀಫ್” ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸೋಮವಾರ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗಡುಕರಿಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ಈ ಬಂಧನ ನಡೆದಿದೆ.

ಬಜಾಲ್ ಶಾಂತಿನಗರ ನಿವಾಸಿ ಇಬ್ರಾಹಿಂ ಸಿನಾನ್ ಯಾನೆ ಚಿನ್ನು (21) ಬಂಧಿತ ಆರೋಪಿ. ಈತ ಈ ಹಿಂದೆ ಹತ್ಯೆಗೀಡಾಗಿದ್ದ ರೌಡಿಶೀಟರ್ ಟೊಪ್ಪಿ ನೌಫಾಲ್ ಎಂಬಾತನ ಸಹೋದರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, 2026ರ ಫೆಬ್ರವರಿ ತಿಂಗಳಲ್ಲಿ ಟ್ಯಾಬ್ಲೆಟ್ ಆರೀಫ್ ಕೊಲೆಗೆ ಸಂಚು ರೂಪಿಸಿದ್ದ ವೇಳೆ ಇಬ್ರಾಹಿಂ ಸಿನಾನ್ ಪ್ರಮುಖವಾಗಿ ಹಾಜರಿದ್ದನು. ಅಷ್ಟೇ ಅಲ್ಲದೆ, ಮಾರ್ಚ್ 27 ರಂದು ನಡೆದ ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳಿಗೆ ಈತ ಹಣಕಾಸಿನ ನೆರವು (ಫಂಡಿಂಗ್) ನೀಡಿದ್ದ ಎಂದು ಸಿಸಿಬಿ ತನಿಖೆಯಿಂದ ದೃಢಪಟ್ಟಿದೆ. ಬಂಧಿತ ಇಬ್ರಾಹಿಂ ಸಿನಾನ್ ವಿರುದ್ಧ ಈಗಾಗಲೇ 2025ರಲ್ಲಿ ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಹಾಗೂ 2024ರಲ್ಲಿ ಮಂಗಳೂರು ಉತ್ತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು ಎರಡು ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ.

ಘಟನೆಯ ಹಿನ್ನೆಲೆ: ಮಾರ್ಚ್ 27ರಂದು ಬೆಳಗಿನ ಜಾವ ತೊಕ್ಕೊಟ್ಟು ಫ್ಲೈಓವರ್ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಆರಿಫ್ ಹುಸೈನ್‌ನನ್ನು ಕಾರಿನಲ್ಲಿ ಬೆನ್ನಟ್ಟಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿ ಕೊಲೆಗೈದಿತ್ತು. ಕೃತ್ಯದ ಬಳಿಕ ಆರೋಪಿಗಳು ತಾವು ಬಳಸಿದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಎಂಬಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆಯ ತೀವ್ರತೆಗಾಗಿ ಪ್ರಕರಣವನ್ನು ಸಿಸಿಬಿ (CCB) ಘಟಕಕ್ಕೆ ವರ್ಗಾಯಿಸಲಾಗಿತ್ತು.

ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ರಿಫಾತ್ ಆಲಿ, ಇಬ್ರಾಹಿಂ ಖಲೀಲ್, ಅಶ್ಫಕ್ ಯಾನೆ ಜುಟ್ಟು ಅಶ್ಫಕ್, ಉಮ್ಮರ್ ಫಾರೂಕ್ ಇರ್ಫಾನ್, ಶಾಕೀರ್, ರಿಝ್ವಾನ್, ಇರ್ಷಾದ್ ಯಾನೆ ಅಕುಡು, ಹರ್ಷಾದ್, ನಿಶಾಕ್ ಯಾನೆ ಪುಚ್ಚೆ ನಿಶಾಕ್, ಬಿ. ಜುನೈದ್ ಯಾನೆ ಕೊಕ್ಕಡ ಜುನೈದ್ ಹಾಗೂ ಸುಹೇಲ್ ಯಾನೆ ಚಿಯಾ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಗಳ ವಿರುದ್ಧ “ಕೋಕಾ ಕಾಯಿದೆ” ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!