ತೂತುಕುಡಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿಗೆ ‘ಡಬಲ್’ ಮರಣದಂಡನೆ ತೀರ್ಪು
ತೂತುಕುಡಿ: ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ಹಾಗೂ ಆಘಾತದ ಅಲೆ ಸೃಷ್ಟಿಸಿದ್ದ ವಿಲಾತಿಕುಲಂನ 12ನೇ ತರಗತಿ ಶಾಲಾ ಬಾಲಕಿಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಧರ್ಮ ಮುನೀಶ್ವರನ್‌ಗೆ ತೂತುಕುಡಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು ಸೋಮವಾರ ಎರಡು ಮರಣದಂಡನೆ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶೆ ಪ್ರೀತಾ ಅವರು, “ಪ್ರಾಸಿಕ್ಯೂಷನ್ ಆರೋಪಿಯ ಮೇಲಿನ ಎಲ್ಲಾ ಅಪರಾಧಗಳನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದೆ. ಈ ಕ್ರೂರ ಅಪರಾಧವು ಸಮಾಜದ ಸಾಮೂಹಿಕ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ” ಎಂದು ಬಣ್ಣಿಸಿ ಗಲ್ಲು ಶಿಕ್ಷೆಯ ಆದೇಶ ಪ್ರಕಟಿಸಿದರು. ಅತ್ಯಾಚಾರ ಮತ್ತು ಕೊಲೆಗೆ ಮರಣದಂಡನೆ ವಿಧಿಸುವುದರ ಜೊತೆಗೆ, ಬಾಲಕಿಗೆ ಗಂಭೀರ ದೈಹಿಕ ಗಾಯ ಉಂಟುಮಾಡಿದ್ದಕ್ಕಾಗಿ ಮತ್ತೊಂದು ವರ್ಷದ ಕಠಿಣ ಜೈಲು ಶಿಕ್ಷೆಯನ್ನೂ ನ್ಯಾಯಾಲಯ ವಿಧಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಪ್ಲೀಡರ್ ಎಲ್ಲಮ್ಮಾಳ್ ಕಿಸ್ಸಿಂಜರ್ ಅವರು ಗರಿಷ್ಠ ಶಿಕ್ಷೆಗಾಗಿ ಬಲವಾದ ವಾದ ಮಂಡಿಸಿದ್ದರು.
ವಿಲಾತಿಕುಲಂ ಬಳಿಯ ವೇದನಾಥಂ ಗ್ರಾಮದ ವಿದ್ಯಾರ್ಥಿನಿ ಮಾರ್ಚ್ 10 ರಂದು ನಾಪತ್ತೆಯಾಗಿದ್ದಳು. ಆ ರಾತ್ರಿಯೇ ಪೋಷಕರು ಕುಲತ್ತೂರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ನಿರ್ಲಕ್ಷ್ಯ ವಹಿಸಿ ಮರುದಿನ ಮಹಿಳಾ ಪೊಲೀಸ್ ಠಾಣೆಗೆ (AWPS) ಹೋಗುವಂತೆ ಕಳುಹಿಸಿದ್ದರು. ಮರುದಿನ ಮಹಿಳಾ ಠಾಣೆಗೆ ಹೋದಾಗಲೂ ನ್ಯಾಯವ್ಯಾಪ್ತಿಯ ನೆಪ ಹೇಳಿ ವಿಳಂಬ ಮಾಡಲಾಗಿತ್ತು.
ಇದಾದ ಕೆಲವೇ ಗಂಟೆಗಳಲ್ಲಿ ವೇದನಾಥಂ ಅರಣ್ಯದಲ್ಲಿ ಬಾಲಕಿಯ ಶವ ತೀವ್ರ ಗಾಯಗಳೊಂದಿಗೆ ಪತ್ತೆಯಾಗಿತ್ತು. ಪೊಲೀಸರ ಈ ಬೇಜವಾಬ್ದಾರಿತನ ಖಂಡಿಸಿ ಹೆದ್ದಾರಿ ತಡೆದು ಭಾರಿ ಪ್ರತಿಭಟನೆ ನಡೆದಿತ್ತು. ತೀವ್ರ ಟೀಕೆಗಳ ಬೆನ್ನಲ್ಲೇ, ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮಾರ್ಚ್ 12 ರಂದು ಎಡಬ್ಲ್ಯೂಪಿಎಸ್ ಇನ್‌ಸ್ಪೆಕ್ಟರ್ ಪ್ರವೀಣಾ ಅವರನ್ನು ಅಮಾನತುಗೊಳಿಸಲಾಗಿತ್ತು.
ಆರೋಪಿಯ ಬಂಧನಕ್ಕೆ ಆಗ್ರಹಿಸಿ ಸಂತ್ರಸ್ತೆಯ ಕುಟುಂಬಸ್ಥರು 10 ದಿನಗಳ ಕಾಲ ಶವ ಸ್ವೀಕರಿಸಲು ನಿರಾಕರಿಸಿದ್ದರಿಂದ ಶವ ಶವಾಗಾರದಲ್ಲೇ ಇತ್ತು. ಇದು ತಮಿಳುನಾಡು ರಾಜಕೀಯದಲ್ಲೂ ದೊಡ್ಡ ವಿವಾದ ಸೃಷ್ಟಿಸಿತ್ತು.
ತಿರುನಲ್ವೇಲಿ ರೇಂಜ್ ಡಿಐಜಿ ಹಾಗೂ ತೂತುಕುಡಿ ಎಸ್‌ಪಿ ಮಧನ್ ನೇತೃತ್ವದ 10ಕ್ಕೂ ಹೆಚ್ಚು ವಿಶೇಷ ತಂಡಗಳು ಹುಡುಕಾಟ ನಡೆಸಿದರೂ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಮಾರ್ಚ್ 19 ರಂದು ಅರಣ್ಯದ ಹತ್ತಿರದ ವಿಂಡ್ ಟರ್ಬೈನ್ (ಗಾಳಿ ಯಂತ್ರ) ಒಂದರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಾಯಲ್ಗುಡಿ ಮೂಲದ ಧರ್ಮ ಮುನೀಶ್ವರನ್ ಸಿಕ್ಕಿಬಿದ್ದಿದ್ದನು.
ವಿಚಾರಣೆಯ ವೇಳೆ ಆರೋಪಿ ಧರ್ಮ ಈಗಾಗಲೇ ವೃದ್ಧ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಮತ್ತೊಂದು ಗಂಭೀರ ಪ್ರಕರಣ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ಆ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಗಿದ್ದಾಗಲೇ ಈತ ಶಾಲಾ ಬಾಲಕಿಯ ಮೇಲೆ ಈ ಭೀಕರ ಕೃತ್ಯ ಎಸಗಿದ್ದನು. ಈತ ಸಮಾಜಕ್ಕೆ ಅತ್ಯಂತ ಅಪಾಯಕಾರಿ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಮೇ 5 ರಂದು ಆರಂಭವಾದ ಬಿಗಿ ಭದ್ರತೆಯ ವಿಚಾರಣೆಯು ಮೇ 21ಕ್ಕೆ ಮುಕ್ತಾಯಗೊಂಡು, ಮೇ 25 ರಂದು ನ್ಯಾಯಾಲಯವು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ನೀಡಲಾದ ಅತ್ಯಂತ ಅಪರೂಪದ ತೀರ್ಪು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.





