ಕಾಸರಗೋಡು: ಖಾಸಗಿ ವಾಹನ ಬಾಡಿಗೆ ಹೆಸರಲ್ಲಿ 80 ಕಾರುಗಳನ್ನೆ ಮಾರಾಟ: ಆರೋಪಿಯ ಬಂಧನ
ಕಾಸರಗೋಡು: ಕಾರು ಮಾಲೀಕರಿಗೆ ಆಕರ್ಷಕ ಮಾಸಿಕ ಬಾಡಿಗೆಯ ಆಮಿಷವೊಡ್ಡಿ, ವಾಹನಗಳನ್ನು ಸಬ್‌ಲೆಟ್‌ಗೆ ನೀಡಿ ಬಳಿಕ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂತರ್-ಜಿಲ್ಲಾ ವಾಹನ ಕಳ್ಳತನ ಜಾಲದ ಕಿಂಗ್‌ಪಿನ್‌ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಕಾಞಂಗಾಡ್‌ನ ಕುಶಾಲ್ ನಗರ ಮೂಲದ ಶಂಸುದ್ದೀನ್ ಮೊಹಮ್ಮದ್ (44) ಬಂಧಿತ ಆರೋಪಿಯಾಗಿದ್ದಾನೆ. ವಿದ್ಯಾನಗರ ಸ್ಟೇಷನ್ ಹೌಸ್ ಆಫೀಸರ್ ಎಂ.ಪಿ. ವಿನೀಶ್ ನೇತೃತ್ವದ ವಿಶೇಷ ಪೊಲೀಸ್ ತಂಡವು ಈ ಕಾರ್ಯಾಚರಣೆ ನಡೆಸಿದೆ.
“ಬಂಧಿತ ಆರೋಪಿ ಶಂಸುದ್ದೀನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕಳೆದ ಎರಡು ವರ್ಷಗಳಲ್ಲಿ ಕೇವಲ ಕಾಸರಗೋಡು ಜಿಲ್ಲೆಯೊಂದರಿಂದಲೇ ಸುಮಾರು 80 ಐಷಾರಾಮಿ ಕಾರುಗಳನ್ನು ಗುತ್ತಿಗೆಗೆ ಪಡೆದು ಬೇರೆಯವರಿಗೆ ಅಕ್ರಮವಾಗಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ” ಎಂದು ಇನ್‌ಸ್ಪೆಕ್ಟರ್ ವಿನೀಶ್ ತಿಳಿಸಿದ್ದಾರೆ. ಮಹಿಳೆಯೊಬ್ಬರು ಹಾಗೂ ಅವರ ಸಂಬಂಧಿಕರಿಗೆ ಸೇರಿದ ಒಂದು ಥಾರ್, ಎರಡು ಬಲೆನೊ ಮತ್ತು ಒಂದು ಸ್ವಿಫ್ಟ್ ಕಾರುಗಳು ನಾಪತ್ತೆಯಾದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಭಾರಿ ದಂಧೆ ಬೆಳಕಿಗೆ ಬಂದಿದೆ.





