ಮಂಗಳೂರು: 6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಸೆರೆ
ಮಂಗಳೂರು: 6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ.
ಆರೋಪಿಯನ್ನು ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯ ಲಕ್ಕಿಪುರ್ ಥಾನಾ ನಿವಾಸಿ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್ ಎಂದು ಗುರುತಿಸಲಾಗಿದೆ.2018 ರಲ್ಲಿ ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಕುಡುಂಬೂರು ಎಂಬಲ್ಲಿರುವ ಪೂಜಾ ಮೊಬೈಲ್ಸ್ ಎಂಬ ಮೊಬೈಲ್ ಅಂಗಡಿಯಲ್ಲಿ ಸುಮಾರು 2,17,740 ರೂ. ಮೌಲ್ಯದ ಮೊಬೈಲ್ ಫೋನ್, ಅದರ ಬಿಡಿಭಾಗ, ಸಿಸಿಟಿವಿ ಡಿವಿಆರ್ ಹಾಗೂ 2,100 ನಗದು ಹಣವನ್ನು ಕಳವು ಮಾಡಿ, ರೂ. 10,000 ಮೌಲ್ಯದ 02 ಕಂಪ್ಯೂಟರ್ ಮೊನಿಟರನ್ನು ಒಡೆದು ನಷ್ಟವುಂಟು ಮಾಡಿರುವ ಪ್ರಕರಣಕ್ಕೆ ಸಂಬಂದಿಸಿ ಈ ಹಿಂದೆ 2018 ರಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ. 152/2018 ಕಲಂ. 427, 457, 380 ಐಪಿಸಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ನ್ಯಾಯಾಲಯವು ಆರೋಪಿತನ ಮೇಲೆ ದಸ್ತಗಿರಿ ವಾರಂಟ್ ನ್ನು ಹೊರಡಿಸಿತ್ತು. ಬಳಿಕ ಆರೋಪಿಯನ್ನು ಕೇರಳ ರಾಜ್ಯದ ಮಂಜೇಶ್ವರದ ಬಳಿ ಮೇಲಾಧಿಕಾರಿಗಳ ನಿರ್ದೇಶನದಂತೆ, ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ರವರ ಮಾರ್ಗದರ್ಶನದಲ್ಲಿ, ಠಾಣಾ ಸಿ ಹೆಚ್ ಸಿ ಗಳಾದ ನವೀನ ಚಂದ್ರ, ಸಯ್ಯದ್ ಇಂತಿಯಾಜ್, ಸಿಪಿಸಿಗಳಾದ ರಾಕೇಶ್ ಮತ್ತು ವಿನಯ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





