ಸುಳ್ಯ: ಮೂರನೇ ತರಗತಿ ವಿದ್ಯಾರ್ಥಿಯ ಮೇಲೆ ಖಾಸಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರೋರ್ವ ರಿಂದ ಹಲ್ಲೆ ಆರೋಪ
ಸುಳ್ಯ: ತಾಲ್ಲೂಕು ಗೂನಡ್ಕ ಪರಿಸರದ ಖಾಸಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಸದಸ್ಯ ಶಿಸ್ತು ಉಲ್ಲಂಘನೆ ನೆಪದಲ್ಲಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವ ಆರೋಪ ಡಿಸೆಂಬರ್ 29ರಂದು
ಕೇಳಿಬಂದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಮೂರನೆಯ ತರಗತಿಯ ಬಾಲಕನಾಗಿದ್ದು ಘಟನೆಯಿಂದ ಬಾಲಕನ ಬೆನ್ನು ಮತ್ತು ಕಾಲಿನ ಭಾಗಗಳಿಗೆ ಬಾಸುಂಡೆಯ ಗಾಯಗಳು ಕಂಡುಬಂದಿದೆ.
ವಿದ್ಯಾರ್ಥಿ ಶಾಲೆ ಬಿಟ್ಟು ಮನೆಗೆ ತೆರಳಿ ಬಟ್ಟೆ ಬದಲಿಸುವ ವೇಳೆ ಈ ಗಾಯದ ಗುರುತು ಕಂಡಿದೆ. ವಿದ್ಯಾರ್ಥಿಯ ತಾಯಿ ಕೇಳಿದಾಗ ಮೊದಲು ಸತ್ಯವನ್ನು ಹೇಳಲು ಹಿಂಜರಿದ ಬಾಲಕ ಪುನರಾವರ್ತಿಸಿ ಕೇಳಿದಾಗ ಘಟನೆಯ ವಿವರವನ್ನು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ನಾನು ಪೆಟ್ಟು ಕೊಟ್ಟ ವಿಷಯವನ್ನು ಮನೆಯಲ್ಲಿ ತಿಳಿಸಿದರೆ ನಾಳೆ ಮತ್ತೊಮ್ಮೆ ಹೊಡೆಯುತ್ತೇನೆ ಎಂಬ ಬೆದರಿಕೆಯನ್ನೂ ಹಾಕಿರುತ್ತಾರೆ ಎಂದು ಬಾಲಕ ಪೋಷಕರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಈ ಘಟನೆ ಸ್ಥಳೀಯ ಪರಿಸರದಲ್ಲಿ ಪ್ರಚಾರ ವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ನಡೆಸಿದ ಸದಸ್ಯರ ಮೇಲೆ ಆಕ್ರೋಶದ ಮಾತುಗಳು ವ್ಯಕ್ತವಾಗುತ್ತಿದೆ.
ಈ ಘಟನೆಯನ್ನು ಸುಳ್ಯ ತಾಲೂಕಿನ ಆಮ್ ಆದ್ಮಿ ಪಕ್ಷದ ಮುಖಂಡ ರಶೀದ್ ಜಟ್ಟಿಪಳ್ಳ ತೀವ್ರವಾಗಿ ಖಂಡಿಸಿದ್ದಾರೆ. ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.