ಪುತ್ತೂರು: ಕಾರು, ಬೈಕ್ ನಡುವೆ ಢಿಕ್ಕಿ: ಬೈಕ್ ಸವಾರ ಮೃತ್ಯು, ಸಹ ಸವಾರೆ ಗಂಭೀರ
ಪುತ್ತೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟು ಸಹ ಸವಾರೆ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ ಸಮೀಪದ ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ನಿವಾಸಿ ಸದಾನಂದ ಆಚಾರ್ಯ (59) ಎಂದು ಗುರುತಿಸಲಾಗಿದೆ. ಇವರು ಅರಸಿನಮಕ್ಕಿಯ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿಯಾಗಿದ್ದರು. ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಅವರ ಪತ್ನಿ ಉಷಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿ ಅರಸಿನಮಕ್ಕಿಯಿಂದ ಕೊಕ್ಕಡ ಮಾರ್ಗವಾಗಿ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದರು. ಗೋಳಿತ್ತೊಟ್ಟು ಬಳಿ ರಾಷ್ಟ್ರೀಯ ಹೆದ್ದಾರಿಗೆ ಇವರು ಪ್ರವೇಶಿಸುತ್ತಿದ್ದಂತೆಯೇ, ಉಪ್ಪಿನಂಗಡಿಯಿಂದ ಶಿರಾಡಿ ಕಡೆಗೆ ಚಲಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಸದಾನಂದ ಆಚಾರ್ಯ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.





