May 8, 2026

ಮಂಗಳೂರು: ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

0
image_editor_output_image939978440-1778176014386.jpg

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗೋಹತ್ಯೆ ಮತ್ತು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ‘ಕಾಪ್ರಿ ಸಿದ್ದೀಕ್’ ಬಂಧಿತ ಆರೋಪಿ.

ಬಂಧಿತ ಆರೋಪಿಯ ವಿರುದ್ಧ ನಗರದ ಉಳ್ಳಾಲ, ಕೊಣಾಜೆ ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ಕಳವು ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯಡಿ ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಯ ವಿರುದ್ಧ ಜಾಮೀನು ರಹಿತ ವಾರಂಟ್ (NBW) ಜಾರಿ ಮಾಡಿತ್ತು. ಆದರೆ ಆರೋಪಿ 2018ರಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದನು.

ಮಂಗಳೂರು ನಗರದಲ್ಲಿ ತಲೆಮರೆಸಿಕೊಂಡಿರುವ ವಾರಂಟ್ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಆಯುಕ್ತರು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡದ ಪಿಎಸ್‌ಐ ಸಿದ್ದಪ್ಪ ಮತ್ತು ಸಿಬ್ಬಂದಿಗಳು ಆರೋಪಿಯ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಆತನನ್ನು ಸೆರೆಹಿಡಿದಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯ 2017ರ ಕಳವು ಪ್ರಕರಣ, ಕೊಣಾಜೆ ಮತ್ತು ಕಂಕನಾಡಿ ಠಾಣೆಗಳಲ್ಲಿ ದಾಖಲಾಗಿದ್ದ ಗೋಹತ್ಯೆ ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದನು.

ಬಂಧಿತ ಅಬೂಬಕ್ಕರ್ ಸಿದ್ದೀಕ್‌ನನ್ನು ಹೆಚ್ಚಿನ ಕಾನೂನು ಕ್ರಮಕ್ಕಾಗಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!