ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ
ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಬೆಟ್ಟದಾಸನಪುರ ಮೂಲದ ವಂದನಾ (23) ಮೃತಪಟ್ಟ ದುರ್ದೈವಿ. ಕಳೆದ ಮೂರು ವರ್ಷಗಳ ಹಿಂದೆ ಹುಳಿಮಾವಿನ ನಿವಾಸಿಯಾಗಿದ್ದ ವಿಕ್ರಂ ಶೇಷ ಎಂಬಾತನೊಂದಿಗೆ ವಂದನಾ ಅವರ ವಿವಾಹವಾಗಿತ್ತು. ಮದುವೆಯಾದ ಆರಂಭದಿಂದಲೂ ಹಣಕ್ಕಾಗಿ ಪೀಡಿಸುತ್ತಿದ್ದ ಧನಪಿಶಾಚಿ ಗಂಡ ವಿಕ್ರಂ ಹಾಗೂ ಆತನ ಕುಟುಂಬಸ್ಥರು, ವಂದನಾ ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಗುರುವಾರ ಸಂಜೆ ಹುಳಿಮಾವಿನ ಹಳೆ ಪೋಸ್ಟ್ ಆಫೀಸ್ ಸಮೀಪವಿರುವ ಮನೆಯಲ್ಲಿ ಅನುಮಾನಾಸ್ಪದವಾಗಿ ವಂದನಾ ಸಾವನ್ನಪ್ಪಿದ್ದಾರೆ. ಈ ದಂಪತಿಗೆ ಮೂರು ತಿಂಗಳ ಮಗು ಕೂಡ ಇದೆ.





