ಬಿ.ಎಸ್ಸಿ ನರ್ಸಿಂಗ್ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ
ಬೆಂಗಳೂರು: ಇಲ್ಲಿನ ಬೊಮ್ಮಸಂದ್ರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಎಸ್ಸಿ ನರ್ಸಿಂಗ್ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಆದಿತ್ಯನ್ ಪಿ.ಎ (19) ಏಪ್ರಿಲ್ 29ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆದಿತ್ಯನ್ ತನ್ನ ಹಾಸ್ಟೆಲ್ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. “ತನ್ನ ಸಾವಿಗೆ ಯಾರೂ ಕಾರಣರಲ್ಲ” ಎಂದು ಬರೆದಿದ್ದ ಡೆತ್ ನೋಟ್ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯಾರ್ಥಿಯು ಖಿನ್ನತೆಯಿಂದ ಬಳಲುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ.
ಮೃತನ ತಂದೆ ಪ್ರದೀಪ್ ಎಸ್. ಅವರು ಈ ಸಾವಿನ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. “ನನ್ನ ಮಗ ಮಾನಸಿಕವಾಗಿ ಬಲಿಷ್ಠನಾಗಿದ್ದ, ಆತ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಸ್ಟೆಲ್‌ನ ಕೆಲವು ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ವಿಚಾರವನ್ನು ಮಗ ನಮಗೆ ತಿಳಿಸಿದ್ದ. ಆ ಪ್ರಕರಣದಲ್ಲಿ ಈತನೂ ಭಾಗಿಯಾಗದಿದ್ದರೂ ಕಾಲೇಜು ಮಂಡಳಿ ಈತನಿಗೂ ಎಚ್ಚರಿಕೆ ನೀಡಿತ್ತು. ಈ ಸಾವಿನ ಹಿಂದೆ ದುಷ್ಕೃತ್ಯ ಅಡಗಿರುವ ಸಾಧ್ಯತೆಯಿದೆ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಹೆಬ್ಬಗುಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





