ಕಾರು ಢಿಕ್ಕಿ: ಕ್ಯಾಮೆರಾಮ್ಯಾನ್ ಸಾವು
ಸಿರ್ಸಾ: ಮದುವೆಯ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ವ್ಯಕ್ತಿಯೊಬ್ಬರು ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ಹರಿಯಾಣದ ಸಿರ್ಸಾದಲ್ಲಿ ನಡೆದಿದೆ.
ವಧುವಿನ ಬೀಳ್ಕೊಡುಗೆಯ (ಬಿದಾಯಿ) ಸಂಭ್ರಮದಲ್ಲಿದ್ದ ಕುಟುಂಬಸ್ಥರ ಕಣ್ಣೆದುರೇ ಈ ಭೀಕರ ಅಪಘಾತ ಸಂಭವಿಸಿದೆ.
ಸಿರ್ಸಾದ ಹಿಸಾರ್ ರಸ್ತೆಯ ಬಸ್ ನಿಲ್ದಾಣದ ಸಮೀಪದ ಖಾಸಗಿ ರೆಸಾರ್ಟ್ ಒಂದರಲ್ಲಿ ವಿವಾಹ ಮಹೋತ್ಸವ ಮುಗಿಸಿ ವಧುವನ್ನು ಕಳುಹಿಸಿಕೊಡುವ ಪ್ರಕ್ರಿಯೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕ್ಯಾಮೆರಾಮನ್ ಮಲ್ಕಿತ್ ಸಿಂಗ್ ಅವರು ವಧುವಿನ ವಿದಾಯದ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ನೇರವಾಗಿ ಮಲ್ಕಿತ್ ಅವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಮಲ್ಕಿತ್ ಅವರು ಸುಮಾರು 25 ಅಡಿಗಳಷ್ಟು ಎತ್ತರಕ್ಕೆ ಗಾಳಿಯಲ್ಲಿ ಹಾರಿ ನಂತರ ರಸ್ತೆಯ ಮೇಲೆ ಬಿದ್ದಿದ್ದಾರೆ. ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದ ಮಲ್ಕಿತ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ಹೃದಯವಿದ್ರಾವಕ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಘಾತಕ್ಕೆ ಕಾರಣವಾದ ಕಾರನ್ನು ಚಲಾಯಿಸುತ್ತಿದ್ದ ಫತೇಹಾಬಾದ್ ಮೂಲದ ಸಂದೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಆರೋಪದಡಿ ಸಿರ್ಸಾದ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.ಮದುವೆ ಮನೆಯಲ್ಲಿದ್ದ ಸಂಭ್ರಮವು ಈ ದುರಂತದಿಂದಾಗಿ ಕ್ಷಣಾರ್ಧದಲ್ಲಿ ಶೋಕದ ಮಡುವಾಗಿ ಮಾರ್ಪಟ್ಟಿದೆ.





